ನವದೆಹಲಿ: ಬಿಜೆಪಿ ನಾಯಕರು "ಎರಡೂ ಕಡೆ ಒಂದೇ ಸರ್ಕಾರ ಇದ್ದರೆ 'ಡಬಲ್ ಇಂಜಿನ್ (Double Engine) ಇದ್ದಂತೆ', ಭಾರೀ ಅಭಿವೃದ್ಧಿ ಕೆಲಸ ಮಾಡಬಹುದು" ಎಂದು ಹೇಳುತ್ತಿರುತ್ತಾರೆ. ಅವರು ಹೇಳುವಂತೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿವೆ. ಆದರೆ ಬಿಜೆಪಿ (BJP) ಮುಖಂಡರು ಹೇಳುವಂತೆ ಅನುಕೂಲಗಳಾಗುತ್ತಿಲ್ಲ.‌ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ (Goods and Service Tax) ಪಾಲು ಸರಿಯಾಗಿ ಬಂದಿಲ್ಲ. ರಾಜ್ಯದ ಯೋಜನೆಗಳಿಗೆ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ. ಆದುದರಿಂದ ಈ ಸಲದ ಬಜೆಟ್‌ನಲ್ಲಾದರೂ ಕರ್ನಾಟಕಕ್ಕೆ ಮಹತ್ತರವಾದವು ದೊರಕಬಹುದೆಂಬ ಭಾರೀ ನಿರೀಕ್ಷೆ ಇದೆ.


COMMERCIAL BREAK
SCROLL TO CONTINUE READING

ಇಂದು ಕೇಂದ್ರದ ಬಜೆಟ್ (Union Budget) ಮಂಡನೆ ಮಾಡುತ್ತಿರುವವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆ ಆಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman). ಇದರಿಂದಾಗಿ ಕೂಡ ಕೇಂದ್ರ ಬಜೆಟ್ ನಿಂದ ಕರ್ನಾಟಕಕ್ಕೆ ಭಾರೀ ಮಹತ್ವದ ಯೋಜನೆಗಳು ಮತ್ತು ಅನುದಾನ ಸಿಗಬಹುದೆಂಬ ನಿರೀಕ್ಷೆ ಹುಟ್ಟುಕೊಂಡಿವೆ.


ರೈಲ್ವೆ ಯೋಜನೆಗಳ ನಿರೀಕ್ಷೆ ಅಪಾರ :
ರಾಜ್ಯ ಸರ್ಕಾರದ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ (Union Budget) ರಾಜ್ಯದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆಯನ್ನು ಹೊಂದಿದೆ. ಆ ಪೈಕಿ ಮೂಲಭೂತ ಕಚ್ಚಾ ಸಾಮಗ್ರಿಯಾಗಿರುವ ಉಕ್ಕಿನ ಪೂರೈಕೆಗೆ ಅವಕಾಶ ನೀಡಬಹುದು, ಬೆಂಗಳೂರು ಮೆಟ್ರೋ (Namma Metro) ವಿಸ್ತರಣೆಗೆ ಹಣಕಾಸಿನ ನೆರವು ನೀಡಬಹುದು, ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ (Bangalore Sub Urban Railway Plan) ಅನುದಾನ ನೀಡಬಹುದು, ಧಾರವಾಡ-ಕಿತ್ತೂರು-ಬೆಳಗಾವಿ ರೈಲ್ವೆ ಯೋಜನೆ ನೀಡಬಹುದು, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ 'ರಾಷ್ಟ್ರೀಯ ಯೋಜನೆ'ಯ ಮಾನ್ಯತೆ ನೀಡಬಹುದು ಮತ್ತು ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಯೋಜನೆಗೆ ಅನುದಾನ ನೀಡಬಹುದು ಎಂಬ ನಿರೀಕ್ಷೆಗಳಿವೆ.


ಇದನ್ನೂ ಓದಿ - Budget 2021: ಕೇಂದ್ರ ‌ಬಜೆಟ್‌ನಲ್ಲಿ 'ಪ್ರತ್ಯೇಕ ಬ್ಯಾಂಕ್' ಘೋಷಣೆ ಸಾಧ್ಯತೆ


ಎಂಎಸ್ ಪಿ ಬಾಕಿ ಹಣದ ನಿರೀಕ್ಷೆ :
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರುವ ಕನಿಷ್ಟ ಬೆಂಬಲ ಬೆಲೆಯ (Minimum Supporting Price) ಬಾಕಿಯನ್ನು ಉಳಿಸಿಕೊಂಡಿದೆ. ಒಟ್ಟು 885 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು ಬಜೆಟ್ ನಲ್ಲಿ ಬಾಕಿ ಹಣವನ್ನು ನೀಡುವಂತೆ ರಾಜ್ಯ ಸರ್ಕಾರ ಈಗಾಗಲೇ ಮನವಿ ಮಾಡಿದೆ. ರೈತರ (Farmers)  ವಿಷಯ ಈಗ ಭಾರೀ ಚರ್ಚೆಯಾಗುತ್ತಿದ್ದು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದೆ. ಈ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ.


ಬೆಳೆ ನಷ್ಟ, ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ನಿರೀಕ್ಷೆ :
ಕಳೆದ ವರ್ಷದ (2020) ಆಗಸ್ಟ್ ತಿಂಗಳಲ್ಲಿ ಬಿದ್ದ ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ತಾಲೂಕುಗಳಲ್ಲಿ ಆಗಿರುವ ಬೆಳೆ ನಷ್ಟ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆಯನ್ನು ಕೂಡ ಕರ್ನಾಟಕ ಇಟ್ಟುಕೊಂಡಿದೆ.


ಇದನ್ನೂ ಓದಿ - Budget 2021: ಬಜೆಟ್ ನಲ್ಲಿ ರೈತರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಕಡಿಮೆ ಬಡ್ಡಿ ದೊಡ್ಡ ಸಾಲ.? ನಿಮಗೂ ಅರ್ಹತೆ ಇದೆಯಾ ನೋಡಿ.


ನೀರಾವರಿಯಲ್ಲಿ ನಿರೀಕ್ಷೆ :
ರಾಜ್ಯದ ನೀರಾವರಿ ಯೋಜನೆಗಳಿಗೂ (Irrigation Plans) ಕೇಂದ್ರ ಬಜೆಟ್ ನಲ್ಲಿ ಸಹಕಾರ ಸಿಗಬಹುದು ಎಂಬ ನಿರೀಕ್ಷೆಗಳು ಮನೆ ಮಾಡಿವೆ. ಆ ಪೈಕಿ ಪ್ರಮುಖವಾದವು ಎಂದರೆ ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಾಗುತ್ತದೆ ಎಂದು. ಏಕೆಂದರೆ ಕೇಂದ್ರ ಸರ್ಕಾರ (Central Government) ಈ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿದರೆ ಯೋಜನಾ ವೆಚ್ಚದ ಶೇಕಡಾ 90ರಷ್ಟು ಅನುದಾನ ಕೇಂದ್ರ ಸರ್ಕಾರದಿಂದಲೇ ಸಿಗಲಿದೆ.


ಬಂದರು‌ ಅಭಿವೃದ್ಧಿಗೆ ಪೂರಕ ಕ್ರಮದ ನಿರೀಕ್ಷೆ :
ಕರ್ನಾಟಕದಲ್ಲಿ ಸುಮಾರು 360 ಕಿಲೋ ಮೀಟರ್ ಉದ್ದದ ಕಡಲ ತೀರವಿದೆ‌. ಆದರೆ ಅಷ್ಟೂ ಉದ್ದದ ಕಡಲ ತೀರ ಅಭಿವೃದ್ಧಿಯಾಗಿಲ್ಲ. ರಾಜ್ಯದ ಬಂದರುಗಳು ಕೂಡ ಸಮರ್ಪಕವಾದ ಅಭಿವೃದ್ಧಿ ಕಂಡಿಲ್ಲ. ಆದುದರಿಂದ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಬಂದರುಗಳ ಅಭಿವೃದ್ಧಿಗೆ (Port Development) ಖಾಸಗಿಯವರು ಬಂಡವಾಳ ಹೂಡಿಲು ಅವಕಾಶ ಮಾಡಿಕೊಡಲಾಗುತ್ತದೆ ಎಂಬ ನಿರೀಕ್ಷೆ ಹುಟ್ಟುಕೊಂಡಿದೆ.


ಇದನ್ನೂ ಓದಿ - Budget 2021: ಶೀಘ್ರದಲ್ಲಿಯೇ ರೈತರಿಗೆ ಸಿಗಲಿದೆಯೇ ಈ ಸಂತಸದ ಸುದ್ದಿ ?


ಅಭಿವೃದ್ದಿಗೆ ಹಣಕಾಸಿನ ನೆರವಿನ‌ ನಿರೀಕ್ಷೆ :
ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನಗಳು ಸಕಾಲಕ್ಕೆ ಬರುತ್ತಿಲ್ಲ.‌ ರಾಜಕೀಯ ಅನಿಶ್ಚಿತತೆಯ ಕಾರಣಕ್ಕೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಗುತ್ತಿಲ್ಲ.‌ ಜೊತೆಗೆ ನಿರಂತರವಾಗಿ ಬರ ಮತ್ತು ಪ್ರವಾಹಗಳು ಕಾಡುತ್ತಿವೆ. ರಾಜ್ಯ ಸರ್ಕಾರದ ಮೇಲಿನ‌ ಸಾಲದ ಹೊರೆ ಹೆಚ್ಚಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹೊಡೆತ ಬಿದ್ದಿದೆ. ಆದುದರಿಂದ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೆಲವು ಯೋಜನೆಗಳನ್ನು ನೀಡಬಹುದು, ಅನುದಾನ ಘೋಷಿಸಬಹುದು ಎಂಬ ನಿರೀಕ್ಷೆ ತುಸು ಹೆಚ್ಚಾಗಿಯೇ ಇದೆ.


ಅನುದಾನ ಕಡಿತ ಸಾಧ್ಯತೆಯೂ ಉಂಟು :
ರಾಜ್ಯಕ್ಕೆ ಭಾರೀ ಮೊತ್ತ ಬಂದು ಬಿಡುತ್ತದೆ ಎಂಬ ನಿರೀಕ್ಷೆಯ ಜೊತೆಗೆ ಆತಂಕವೂ ಉಂಟು. ರಾಜ್ಯದ ತೆರಿಗೆ ಪಾಲನ್ನು (GST) ಕೇಂದ್ರ ಸರ್ಕಾರ ಸರಿಯಾಗಿ ಕೊಟ್ಟಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ರೂಪದಲ್ಲಿ 34,045 ಕೋಟಿ ರೂಪಾಯಿ ಕೊಡಬಹುದು ಎಂನ  ನಿರೀಕ್ಷೆ  ಹೊಂದಿದೆ. ಆದರೆ ಕೋವಿಡ್ -19 (Covid -19) ನೆಪದಲ್ಲಿ ಅನುದಾನ ಕಡಿತಗೊಳ್ಳುವ ಸಾಧ್ಯತೆಯೂ ಇದೆ. ಸುಮಾರು ಶೇಕಡಾ 20 ರಷ್ಟು ಅನುದಾನ ಕಡಿತ ಆಗಬಹುದು ಎಂದು ಹೇಳಲಾಗುತ್ತಿದೆ. ಹಾಗೆ ಮಾಡಿದರೆ ಈಗಾಗಲೇ ಹದಗೆಟ್ಟಿರುವ ರಾಜ್ಯದ ಹಣಕಾಸಿನ ಪರಿಸ್ಥಿತಿಗೆ 'ಗಾಯದ ಮೇಲೆ ಬರೆ' ಎಳೆದಂತಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.