ಲಂಡನ್: ವಿಜಯ್ ಮಲ್ಯ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚಿಸಿ 2016 ಮಾರ್ಚ್ ತಿಂಗಳಿಂದ ಲಂಡನ್ ನಲ್ಲಿದ್ದಾರೆ. ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ತನಿಖಾ ಸಂಸ್ಥೆಗಳು ಲಂಡನ್ ಸರ್ಕಾರದಲ್ಲಿ ಮನವಿ ಮಾಡಿಕೊಂಡಿವೆ. ಈ ಸಂಬಂಧ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಲಿದೆ.
ಸಿಬಿಐ ಮತ್ತು ಜಂಟಿ ನಿರ್ದೇಶಕ ಎ. ಸಾಯಿ ಮನೋಹರ್ ನೇತೃತ್ವದಲ್ಲಿ ಸಿಬಿಐ ಮತ್ತು ಇಡಿ ಜಂಟಿ ತಂಡ ಯುಕೆಗೆ ತೆರಳಿದೆ. ಮಲ್ಯ ರವಾನೆಗೆ ಸಂಬಂಧಿಸಿದಂತೆ ಇಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ಸಾಧ್ಯತೆ ಇದೇ ಎಂದು ನಂಬಲಾಗಿದೆ. ಈ ಪ್ರಕರಣದಲ್ಲಿ ಭಾರತಕ್ಕೆ ಜಯ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
2018 ರ ಫ್ಯುಗಿಟಿವ್ ಎಕನಾಮಿಕ್ ಅಪರಾಧಗಳ ಆಕ್ಟ್ ಅಡಿಯಲ್ಲಿ ಒಂದು ಪ್ಯುಗಿಟಿವ್ ಆರ್ಥಿಕ ಅಪರಾಧಿಯನ್ನು ಘೋಷಿಸಲು ವಿಶೇಷ ನ್ಯಾಯಾಲಯದಿಂದ ಲಂಡನ್ನಲ್ಲಿ ವಾಸಿಸುತ್ತಿರುವ ಉದ್ಯಮಿ ಮಲ್ಯರನ್ನು ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ ವಿನಂತಿಸಿದೆ. ಈ ಕಾನೂನಿನಡಿಯಲ್ಲಿ ಓರ್ವ ವ್ಯಕ್ತಿಯು ಪ್ಯುಗಿಟಿವ್ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟರೆ, ಅವನ ಆಸ್ತಿಯನ್ನು ವಶಪಡಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.
ಬ್ರಿಟನ್ ನಿಂದ ಭಾರತಕ್ಕೆ ಹಸ್ತಾಂತರಿಸುವ ವಿಷಯವಾಗಿ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ವಿಜಯ್ ಮಲ್ಯ ಬುಧವಾರ ತಿಳಿಸಿದ್ದಾರೆ. ಅಲ್ಲದೆ ಸಾರ್ವಜನಿಕರ ಹಣವನ್ನು ಹಿಂದಿರುಗಿಸಲು ನಾನು ಸಿದ್ಧನಿದ್ದೇನೆ ಎಂದೂ ಮಲ್ಯ ತಿಳಿಸಿದ್ದಾರೆ.
ಬ್ಯಾಂಕ್ಗಳಿಂದ ಪಡೆದ ಸಾಲ ಮರುಪಾವತಿಸಲು ಸಿದ್ಧನಿದ್ದು, ಬ್ಯಾಂಕುಗಳು ಅದನ್ನು ದಯವಿಟ್ಟು ಸ್ವೀಕರಿಸಬೇಕು ಎಂದು ಟ್ವಿಟ್ಟರ್ ಮೂಲಕ ವಿಜಯ್ ಮಲ್ಯ ಮನವಿ ಮಾಡಿಕೊಂಡಿದ್ದಾರೆ. ಮಾಧ್ಯಮಗಳು ತನ್ನನ್ನು ಮೋಸಗಾರ, ದೇಶಬಿಟ್ಟು ಓಡಿಹೋಗಿ ತಲೆಮರೆಸಿಕೊಂಡಿದ್ದಾನೆ ಎಂದೆಲ್ಲ ತಪ್ಪಾಗಿ ಬಿಂಬಿಸುತ್ತಿವೆ. ನಾನು ಸಾಲ ಮಾಡಿದ ಹಣವನ್ನು ವಾಪಾಸ್ ನೀಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ನಾನು ಕೊಟ್ಟ ಆಫರ್ ಅನ್ನು ಬ್ಯಾಂಕ್ಗಳು ಒಪ್ಪಿಕೊಂಡರೆ ಅದರಿಂದ ಖಂಡಿತ ನಷ್ಟವಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ನನ್ನ ವರ್ತನೆ ಬಗ್ಗೆ ಮಾಧ್ಯಮಗಳಲ್ಲಿ ಹಲವು ರೀತಿಯಲ್ ಚರ್ಚೆ ನಡೆದಿರುವುದನ್ನು ನಾನು ನೋಡಿದ್ದೇನೆ ಎಂದಿರುವ ಮಲ್ಯ ಇದು ವಿಭಿನ್ನ ವಿಷಯವಾಗಿದ್ದು, ಕಾನೂನು ತನ್ನ ಕೆಲಸ ಮಾಡಲಿದೆ ಎಂದಿದ್ದಾರೆ.
ಸಾರ್ವಜನಿಕ ಹಣವು ಅತ್ಯಂತ ಮುಖ್ಯವಾದ ವಿಷಯವಾಗಿದೆ ಮತ್ತು ನಾನು 100 ಪ್ರತಿಶತ ಸಾಲವನ್ನು ವಾಪಸ್ ನೀಡಲು ಸಿದ್ಧನಿದ್ದೇನೆ. ತನ್ನ ವಿನಂತಿಯನ್ನು ಒಪ್ಪಿಕೊಳ್ಳಲು ಬ್ಯಾಂಕುಗಳು ಮತ್ತು ಸರ್ಕಾರವನ್ನು ವಿನಂತಿಸುತ್ತೇನೆ ಎಂದು ಮಲ್ಯ ಹೇಳಿದರು. ಹಲವಾರು ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲವನ್ನು ಮಲ್ಯರ ಕಿಂಗ್ ಫಿಷರ್ ಕಂಪನಿಗೆ ನೀಡಲಾಗಿದೆ. ವಿಮಾನದ ಇಂಧನದ ಬೆಲೆ ಹೆಚ್ಚಳವಾಗಿದ್ದು ಕೂಡ ಕಿಂಗ್ಫಿಷರ್ ಏರ್ಲೈನ್ಸ್ಗೆ ನಷ್ಟವಾಗಲು ಒಂದು ಕಾರಣವಾಗಿತ್ತು. ಆದರೆ, 3 ದಶಕಗಳ ಕಾಲ ಭಾರತದ ಅತಿದೊಡ್ಡ ಮದ್ಯದ ಕಂಪನಿಯನ್ನು ನಡೆಸಿದ್ದ ಕಿಂಗ್ಫಿಷರ್ ಗ್ರೂಪ್ನಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ಲಾಭವಾಗಿತ್ತು. ಹಾಗೇ, ಕಿಂಗ್ಫಿಷರ್ ಏರ್ಲೈನ್ಸ್ನಿಂದಲೂ ರಾಜ್ಯ ಸರ್ಕಾರಕ್ಕೆ ಉತ್ತಮ ಆದಾಯ ಬಂದಿತ್ತು. ಆದರೆ, ದುರಾದೃಷ್ಟವೆಂಬಂತೆ ಆ ಕಂಪನಿ ನಷ್ಟ ಅನುಭವಿಸುವಂತಾಯಿತು. ಅದನ್ನೆಲ್ಲ ಮರೆತು ಈಗ ನನ್ನನ್ನು ಕಳ್ಳ ಎಂಬಂತೆ ಕಾಣಲಾಗುತ್ತಿದೆ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಮಲ್ಯ 2016 ಮಾರ್ಚ್ ತಿಂಗಳಿಂದ ಲಂಡನ್ ನಲ್ಲಿದ್ದಾರೆ.