Photo Gallery: ಕೃಷ್ಣೆಯ ಜಲಧಿಗೆ ಸಿಎಂ ಸಿದ್ದರಾಮಯ್ಯ ಬಾಗೀನ ಅರ್ಪಣೆ

ಮುಖ್ಯಮಂತ್ರಿ Siddaramaiah ಅವರು ಕೃಷ್ಣಾ ಭಾಗ್ಯ ಜಲ ನಿಗಮದಿಂದ ಆಲಮಟ್ಟಿಯಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃಷ್ಣೆಗೆ ಬಾಗಿನ ಅರ್ಪಿಸಿ ಮಾತನಾಡಿದರು.

ಆಲಮಟ್ಟಿಯ ಸಂಗ್ರಹಣೆ ಮಟ್ಟ 519.6 ಮೀಟರ್ ಅಡಿ ಇದೆ. ಅದರ ಒಟ್ಟು ಸಂಗ್ರಹಣೆ 123.08 ಟಿ.ಎಂಸಿ. ಇಡೀ ಕರ್ನಾಟಕದ ಜಲಾಶಯಗಳಲ್ಲಿ ಕೃಷ್ಣಾ ಮೇಲ್ದಂಡೆ ಪೂರ್ಣ ಭರ್ತಿಯಾಗಿದೆ. ನಾರಾಯಣಪುರ ಜಲಾಶಯ ತುಂಬಿದೆ. ಹಾಗಾಗಿ ನಾಲೆಗಳಿಗೆ, ಕುಡಿಯುವ ನೀರು, ವಿದ್ಯುಚ್ಛಕ್ತಿ ಉತ್ಪಾದನೆಗೆ ನೀರು ಹರಿಸಲಾಗುತ್ತಿದೆ. ಕುಡಿಯುವ ನೀರು ಬಿಟ್ಟಿರುವುದರಿಂದ ಒಂದು ಟಿಎಂಸಿ ನೀರು ಕಡಿಮೆ ಇದೆ. ನಾರಾಯಣಪುರದಲ್ಲಿಯೂ ಕೂಡ 492 ಮೀ. ನೀರು ಇದೆ. 105.46 ಟಿಎಂಸಿ ನೀರು ಲೈವ್ ಸ್ಟೋರೇಜೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ 11 ಟಿಎಂಸಿ ನೀರಿನ ಸಂಗ್ರಹ ಕಡಿಮೆ ಇದೆ. ಕಳೆದ ವರ್ಷ ಒಳಹರಿವು ಹೆಚ್ಚಿತ್ತು. 25450 ಕ್ಯೂಸೆಕ್ ಇತ್ತು, ಆದರೆ ಈಗ 3730 ಕ್ಯೂಸೆಕ್ ಇದೆ.

 

1 /5

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ ಪೂರ್ಣಗೊಳ್ಳಲು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಗಳು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 1 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ. 2023 ರ ಅಂದಾಜಿನ ಪ್ರಕಾರ 83,700 ಕೋಟಿ ರೂ. ಇದ್ದು, ಯೋಜನೆ ಪೂರ್ಣಗೊಳ್ಳುವವರೆಗೆ 1 ಲಕ್ಷ ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧವಿದ್ದು,ಕೇಂದ್ರಸರ್ಕಾರ ತ್ವರಿತಗತಿಯಲ್ಲಿ ಅಧಿಸೂಚನೆ ಹೊರಡಿಸಬೇಕಾಗಿದೆ. ಆದಾಗ್ಯೂ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಗಳು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚಿನ ಗಮನಹರಿಸಲಾಗುವುದು.

2 /5

ಕೇಂದ್ರ ಸಚಿವರು ಭೇಟಿಗೆ ಅವಕಾಶ ನೀಡಿದ್ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಒತ್ತಾಯಿಸಲಾಗುವುದು. ಮಹಾದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿದ್ದರೂ, ಅರಣ್ಯ ಹಾಗೂ ಪರಿಸರ ಅನುಮತಿ ದೊರೆತಿರುವುದಿಲ್ಲ.ಈ ಯೋಜನೆಗೆ ಅನುಮತಿ ನೀಡಲು ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು.  ಇಂದು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಿಲ್ಲದ ಕಾರಣ ಹಾಗೂ ಕುಡಿಯುವ ನೀರಿನ ಕೊರತೆಯಿಂದಾಗಿ ಸಂಕಷ್ಟದ ಸಮಯವನ್ನು ಎದುರಿಸುವಂತಾಗಿದೆ. ಜಲನೀತಿಯ ಪ್ರಕಾರ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಾಗುತ್ತದೆ.  

3 /5

ಕೃಷ್ಣಾ ಕಾವೇರಿ ಜೀವನದಿಗಳು. ಕಾವೇರಿ, ಕೃಷ್ಣಾ ನದಿ ಪಾತ್ರದಲ್ಲಿರುವವರೆಲ್ಲರೂ ನಮ್ಮ ರೈತರೇ. ತಾರತಮ್ಮ ಮಾಡುವ ಪ್ರಶ್ನೆಯೇ ಇಲ್ಲ. ಅಖಂಡ ಕರ್ನಾಟಕದಲ್ಲಿ ದಕ್ಷಿಣ, ಉತ್ತರ ಎಂಬ ಪ್ರಶ್ನೇ ಇಲ್ಲ.ಕಾವೇರಿ ನೀರಿಗೆ ಸಂಬಂಧಿಸಿದಂತೆ ಸರ್ವ ಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರ ಸಮಯವನ್ನು ಕೋರಿದ್ದೇವೆ. ಈಗಾಗಲೇ ನಮ್ಮ ಜಲಸಂಪನ್ಮೂಲ ಸಚಿವರು ನಮ್ಮ ರಾಜ್ಯದ ಪರವಾಗಿ ವಾದ ಮಂಡಿಸುವ ವಕೀಲರನ್ನು ಭೇಟಿ ಮಾಡಿ ಅವರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಬುಧವಾರ ಪ್ರಕರಣ ವಿಚಾರಣೆಗೆ ಬರಲಿದ್ದು ನಮ್ಮ ವಾದ ಏನಿರಬೇಕು ಎಂದು ಸೂಕ್ತ ನಿರ್ದೇಶನ ನೀಡಿದ್ದಾರೆ.  

4 /5

ಬರ ಘೋಷಣೆಯ ನಂತರ ಕೇಂದ್ರ ಸರ್ಕಾರಕ್ಕೆ ಬರಪೀಡಿತ ತಾಲ್ಲೂಕುಗಳಿಗೆ ನೆರವು ಕೋರಿ ಮನವಿ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರದ ಸಮಿತಿಯು ಸಮೀಕ್ಷೆ ನಡೆಸಿದ ನಂತರ, ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಹಣ ಬಿಡುಗಡೆ ಮಾಡುತ್ತದೆ. ರಾಜ್ಯಸರ್ಕಾರ ಈ ಅನುದಾನದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತದೆ. ಅದಲ್ಲದೇ ರಾಜ್ಯ ಸರ್ಕಾರವೂ ಪರಿಹಾರ ಕಾರ್ಯಗಳಿಗೆ ಹಣ ವಿನಿಯೋಗಿಸಲಿದೆ. 2020 ರಿಂದ  ಇಲ್ಲಿಯವರೆಗೆ ಪರಿಷ್ಕರಣೆ ಆಗಿಲ್ಲ. ಎನ್ ಡಿ ಆರ್ ಎಫ್ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಹಾಗೂ ರಾಜ್ಯಗಳಿಗೆ ಹೆಚ್ಚು ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.  

5 /5

ಒಟ್ಟಾರೆಯಾಗಿ ಈ ವರ್ಷ ಕೃಷ್ಣಾ ಮೇಲ್ದಂಡೆ ಪ್ರದೇಶದ ಅಚ್ಚುಕಟ್ಟಿನಲ್ಲಿ ಮಳೆ ಕಡಿಮೆಯಾಗಿದೆ. ಈ ವರ್ಷ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಶೇ. 56% ಮಳೆ ಕೊರತೆಯಾಗಿದೆ. ಆಗಸ್ಟ್ ನಲ್ಲಿಯೂ ಕೊರತೆ ಕಂಡು ಬಂದಿದ್ದು, ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ಈಗಾಗಲೇ ಮೂರು ಸಭೆಗಳನ್ನು ನಡೆಸಿದೆ. ಪುನ: ಸೆ.04 ರಂದು ಮತ್ತೊಂದು ಸಭೆ ನಡೆಯಲಿದೆ. 113 ತಾಲ್ಲೂಕುಗಳಲ್ಲಿ ಬರಗಾಲ ಇದೆ ಎಂದು ಜಂಟಿ ಸಮೀಕ್ಷೆ ನಡೆಸಿದ್ದಾರೆ. ಇದಲ್ಲದೆ 73 ತಾಲ್ಲೂಕುಗಳಲ್ಲಿ ಬರಗಾಲ ಉಂಟಾಗಿದೆ ಎಂದು ಹೇಳಿದ್ದಾರೆ. ಅದಕ್ಕೂ ಜಂಟಿ ಸಮೀಕ್ಷೆ ನಡೆಸಿ ವರದಿ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ.