ಮೈಸೂರು: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ವೈಭವದ ಮೈಸೂರು ದಸರಾವನ್ನು ಕವಿ ಕೆ.ಎಸ್. ನಿಸಾರ್ ಅಹ್ಮದ್ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.
ನಾಡ ಹಬ್ಬ ಎಂದೇ ಪ್ರಖ್ಯಾತಿ ಪಡೆದಿರುವ ಮೈಸೂರು ದಸರಾ ಆಚರಣೆಯು ಇಂದಿನಿಂದ ಆರಂಭಗೊಳ್ಳಲಿದ್ದು, ಇಂದು ಬೆಳಿಗ್ಗೆ 8 ಗಂಟೆಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ, ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಕವಿ ಕೆ.ಎಸ್. ನಿಸಾರ್ ಅಹ್ಮದ್ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. 08:45ರ ಶುಭ ತುಲಾ ಲಗ್ನದಲ್ಲಿ ದಸರಾ ಕಾರ್ಯಕ್ರಮವು ಅಧಿಕೃತವಾಗಿ ಉದ್ಘಾಟನೆಯಾಯಿತು.
ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕವಿ ನಿಸಾರ್ ಅಹ್ಮದ್, ಈ ಸಮಾರಂಭದ ಉದ್ಘಾಟನೆ ಅವಕಾಶ ದೊರೆತಿದ್ದು ನನ್ನ ಭಾಗ್ಯ. ಈ ದೊಡ್ಡ ಸಮ್ಮೇಳನ ಉದ್ಘಾಟಿಸಿದ್ದು ನನಗೆ ಅತೀವ ಸಂತೋಷ ನೀಡಿದೆ ಎಂದು ಹರ್ಷವ್ಯಕ್ತ ಪಡಿಸಿದರು.
ಈ ದಸರಾ ಉತ್ಸವಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ, ಧಾರ್ಮಿಕ ಹಿನ್ನೆಲೆಯೊಂದಿಗೆ ಸಾಂಸ್ಕೃತಿಕ ಸೊಗಡನ್ನು ಈ ವಿಶ್ವ ವಿಖ್ಯಾತ ದಸರಾ ಉತ್ಸವ ಹೊಂದಿದೆ. ಈ ದಸರಾ ಉತ್ಸವವು ಜಾತಿ, ಧರ್ಮ, ಕುಲ ಎಲ್ಲವನ್ನೂ ಮೀರಿದ್ದು ಎಂದು ನಿಸಾರ್ ಅಹ್ಮದ್ ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ತಮ್ಮ ಆಪ್ತರೊಂದಿಗೆ ಆಗಮಿಸಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರು. ಇದೇ ವೇಳೆ ಮಾಧ್ಯಮದವರ ಚಿತ್ರೀಕರಣವನ್ನು ನಿರಾಕರಿಸಿದರು.
ಇನ್ನೂ, ಸಾಂಸ್ಕೃತಿಕ ರಾಜಧಾನಿಯ ಅರಮನೆಯಲ್ಲಿ ಇಂದು ಸಂಜೆ 6 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಿಎಂ ಉದ್ಘಾಟಿಸಲಿದ್ದಾರೆ. ಜೊತೆಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭವು ಕೂಡ ನೆರವೇರಲಿದೆ.