2022ರ ನವೆಂಬರ್ 2,3 ಮತ್ತು 4 ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಭಾವಿಯಾಗಿ ಬಂಡವಾಳ ಹೂಡಿಕೆಗೆ ಆಕರ್ಷಿಸಲು ಡಾ. ಮುರುಗೇಶ ಆರ್ ನಿರಾಣಿ ನೇತೃತ್ವದ ನಿಯೋಗ ಅಮೆರಿಕಕ್ಕೆ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಅಲ್ಲಿನ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಭಾಗವಾಗಿ ಅಂತಾರಾಷ್ಟ್ರೀಯ ರೋಡ್ ಶೋ ಕೈಗೊಂಡಿರುವ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಣಜೀತ್ ಸಿಂಗ್ ಸಂಧು ಅವರನ್ನು ವಾಷಿಂಗ್ಟನ್ನಲ್ಲಿ ಭೇಟಿಯಾಗಿ, ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ವಿವರಿಸಿದರು.
ಬೆಂಗಳೂರು ಅರಮನೆಯಲ್ಲಿ ನವೆಂಬರ್ 2ರಿಂದ 4ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ ರಮಣರೆಡ್ಡಿ ಹಾಗೂ ಇತರ ಅಧಿಕಾರಿಗಳನ್ನು ಉಪಸ್ಥಿತಿರಿದ್ದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಡಾ. ಮುರುಗೇಶ ಆರ್ ನಿರಾಣಿ ವಾಷಿಂಗ್ಟನ್ನಲ್ಲಿ ಗುರುವಾರ ಸಂಜೆ ಲಾಕ್ಹೀಡ್ ಮಾರ್ಟಿನ್ನ ಡೇವ್ ಸಟನ್, ರಾಬರ್ಟ್ ಗಾರ್ನರ್, ಮಾರ್ಕ್ ರಿಡಲ್ ಮತ್ತು ಡೌ ಹ್ಯಾಸ್ಕಿನ್ಸ್ ಅವರನ್ನು ಭೇಟಿಯಾದರು.
ಕರ್ನಾಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ಕೌಶಲಾಭಿವೃದ್ಧಿ ಕೇಂದ್ರ ಮತ್ತು ಸಿಕೋರ್ಸ್ಕಿ ಹೆಲಿಕಾಪ್ಟರ್ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ವಿಮಾನಯಾನ ಕಂಪನಿಗಳ ಪ್ರಮುಖರೊಂದಿಗೆ ಸಚಿವರು ಚರ್ಚಿಸಿದರು. ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ ರಮಣ ರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು