ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡಿ, ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೇಟ್ ವಿತರಿಸುವ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಲನೆ ನೀಡಿದರು.
ನಾಡಿನ ಎಲ್ಲ ಮಹಿಳೆಯರು ನಮ್ಮ ಈ ಯೋಜನೆಯ ಲಾಭ ಪಡೆದು ಮತ್ತಷ್ಟು ಸಶಕ್ತ ಮತ್ತು ಸ್ವಾವಲಂಬಿಗಳಾಗಲಿ ಎಂದು ಮನಸ್ಪೂರ್ತಿಯಾಗಿ ಹಾರೈಸುತ್ತೇನೆ.
ಆರ್ಥಿಕ ಸಂಕಷ್ಟದ ನಡುವೆಯೂ ಬದುಕಿನ ಉತ್ಸಾಹ ಕಳೆದುಕೊಳ್ಳದೆ, ಸವಾಲುಗಳನ್ನು ಮೆಟ್ಟಿನಿಂತು ಹೋರಾಟದ ಮೂಲಕ ಬದುಕು ಕಟ್ಟಿಕೊಂಡಿರುವ ಕನ್ನಡ ನೆಲದ ಪ್ರತಿ ಮಹಿಳೆಯೂ ನಮ್ಮ ಈ ಯೋಜನೆಯ ಹಿಂದಿನ ಪ್ರೇರಕ ಶಕ್ತಿ.
ಹೆಣ್ಣುಮಕ್ಕಳು ಇಂದು ಮಧ್ಯಾಹ್ನ 1 ಗಂಟೆಯಿಂದ ಉಚಿತ ಪ್ರಯಾಣದ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು. ಎಲ್ಲಾ ಮಹಿಳೆಯರಿಗೂ ಸ್ಮಾರ್ಟ್ ಕಾರ್ಡುಗಳನ್ನು ನೀಡಲಾಗುವುದು. ಈ ಯೋಜನೆ ವಿದ್ಯಾರ್ಥಿನಿಯರಿಗೂ ಅನ್ವಯವಾಗುತ್ತದೆ. ಈ ಯೋಜನೆಗಳಲ್ಲಿ ಯಾರೂ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳಿಗೆ ತಲುಪಲಿದೆ.
10 ಕೆಜಿ ಆಹಾರಧಾನ್ಯವನ್ನು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ನೀಡುವ ಭರವಸೆ ನೀಡಿದ್ದೇವೆ. ಇದಕ್ಕೆ 10,100 ಕೋಟಿ ರೂ.ಗಳ ಅಗತ್ಯವಿದೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಲೇಬೇಕು. ಹಸಿವಿನ ಕಷ್ಟ ಊಟವಿಲ್ಲದವರಿಗೆ ತಿಳಿಯುತ್ತದೆ. ಹೊಟ್ಟೆ ತುಂಬಿ ಅಜೀರ್ಣ ಮಾಡಿಕೊಂಡವರಿಗೆ ತಿಳಿದಿರುವುದಿಲ್ಲ.
ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹಲವರು ಟೀಕೆ ಮಾಡಿದರು. ಆದರೆ ನಾವು ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಐದೂ ಗ್ಯಾರೆಂಟಿಗಳ ಜಾರಿಗೆ 59,000 ಕೋಟಿ ರೂ.ಗಳ ಅಗತ್ಯವಿದೆ. ಎಷ್ಟು ಹಣ ಖರ್ಚು ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ. ಯಾರಿಗೆ ನೀಡುತ್ತಿದ್ದೇವೆ ಎನ್ನುವುದು ಮುಖ್ಯ.
ಗೃಹ ಜ್ಯೋತಿ ಯೋಜನೆ ಜುಲೈ 1 ರಿಂದ ಜಾರಿಗೆ ಬರುತ್ತಿದೆ. ಎಲ್ಲಾ ಜಾತಿ ಮತ್ತು ಧರ್ಮದ ಬಡವರಿಗೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ನಮಗೆ ಯಾವುದೇ ಜಾತಿ ಧರ್ಮ ಇಲ್ಲ. ನಾವು ಹಿಂದೆ ನುಡಿದಂತೆ ನಡೆದಿದ್ದೇವೆ. ಹಿಂದಿನ ಬಾರಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದಿದ್ದೇವೆ.
ಅನೇಕ ಮುಂದುವರೆದ ದೇಶಗಳಲ್ಲಿ ಮಹಿಳೆಯರ ಪಾಳ್ಗೊಳ್ಳುವಿಕೆ ಪ್ರಮಾಣ ಭಾರತಕ್ಕಿಂತ ಸಾಕಷ್ಟು ಹೆಚ್ಚಿದೆ, ಅಮೆರಿಕಾದಲ್ಲಿ ಶೇ 53% ರಷ್ಟು, ಚೈನಾ ದಲ್ಲಿ ಶೇ 54 ರಷ್ಟು, ಆಸ್ಟ್ರೇಲಿಯಾದಲ್ಲಿ ಶೇ 57, ಇಂಡೋನೇಶಿಯಾದಲ್ಲಿ ಶೇ 57 ರಷ್ಟು, ಬಾಂಗ್ಲಾದೇಶದಲ್ಲಿ ಶೇ 30 ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಕೇವಲ 24 ರಷ್ಟು ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ದೇಶದಲ್ಲಿ 2014 ರ ನಂತರ ಶೇ 30 ರಷ್ಟಿದ್ದ ಪ್ರಮಾಣ ಶೇ. 24ಕ್ಕೆ ಇಳಿದಿದೆ. ಯಾವ ದೇಶಗಳಲ್ಲಿ ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಆ ದೇಶ ಅಭಿವೃದ್ಧಿಯಾಗುತ್ತದೆ. ಮಹಿಳೆಯರಿಗೆ ಶಕ್ತಿ ತುಂಬಿದಾಗ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ಕ್ರಮೇಣ ಅಳಿಸಲು ಸಾಧ್ಯ.
ಶಕ್ತಿ ಯೋಜನೆ ಮಹಿಳೆಯರಿಗಾಗಿ ಮಾಡಿರುವ ಕಾರ್ಯಕ್ರಮ. ಸಮಾಜದಲ್ಲಿ ಅರ್ಧದಷ್ಟಿರುವ ಮಹಿಳೆಯರು ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದಾರೆ. ಅಲ್ಪಸಂಖ್ಯಾತರು, ಮಹಿಳೆಯರು, ಅವಕಾಶಗಳಿಂದ ಹಾಗೂ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ.
ಉದ್ಯೋಗ, ಶಿಕ್ಷಣ, ಕುಟುಂಬ ನಿರ್ವಹಣೆ ಮುಂತಾದ ಜವಾಬ್ದಾರಿಯನ್ನು ನಿರ್ವಹಿಸುವ ಕಾರಣಕ್ಕಾಗಿ ನಿತ್ಯ ಸಂಚರಿಸುವ ನಾಡಿನ ಅಸಂಖ್ಯ ಮಹಿಳೆಯರ ಹೋರಾಟದ ಬದುಕಿಗೆ ನಮ್ಮ ಈ ಯೋಜನೆ ಬಲ ತುಂಬಲಿದೆ ಎಂಬ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಮಧು ಬಂಗಾರಪ್ಪ, ಶಾಸಕ ರಿಜ್ವಾನ್ ಅರ್ಷದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.