ಇದು ತಿರುಪತಿಯ ಅಪ್ಪ – ಮಗಳ ಕಥೆ. ಅಪ್ಪ ಸರ್ಕಲ್ ಇನ್ಸ್ ಪೆಕ್ಟರ್ ಮಗಳು ಡಿಎಸ್ ಪಿ..
ತಿರುಪತಿ : ತಮ್ಮ ಮಕ್ಕಳ ಯಶಸ್ಸಿನಲ್ಲಿ ಹೆತ್ತವರು ಸಾರ್ಥಕತೆ ಅನುಭವಿಸುತ್ತಾರೆ. ಅಂತಾದ್ದೊಂದು ಅಪ್ಪ ಮಗಳ ಸ್ಟೋರಿ ಇಲ್ಲಿದೆ. ನೀವದನ್ನು ನೋಡಲೇ ಬೇಕು. ಇದು ತಿರುಪತಿಯ ಅಪ್ಪ – ಮಗಳ ಕಥೆ. ಅಪ್ಪ ಶ್ಯಾಮ್ ಸುಂದರ್ ಸರ್ಕಲ್ ಇನ್ಸ್ ಪೆಕ್ಟರ್. ಅವರ ಮಗಳು ಪ್ರಶಾಂತಿ ಕಷ್ಟ ಪಟ್ಟು ಓದಿ ಡಿಎಸ್ ಪಿ ಆಗಿದ್ದಾಳೆ. ಡ್ಯೂಟಿಯಲ್ಲಿರುವಾಗ ಸರ್ಕಲ್ ಇನ್ಸ್ ಪೆಕ್ಟರ್ ಅಪ್ಪ ತನ್ನ ಮೇಲಾಧಿಕಾರಿ DSP ಮಗಳಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಈ ಫೋಟೋ ವೈರಲ್ ಆಗಿದೆ.
ಸರ್ಕಲ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ (Shyam Sumndar) ಆನ್ ಡ್ಯೂಟಿಯಲ್ಲಿ ತನ್ನ ಮಗಳು ಡಿಎಸ್ ಪಿ ಪ್ರಶಾಂತಿ (P Prashanthi) ಅವರಿಗೆ ಸೆಲ್ಯೂಟ್ ಹೊಡೆದಾಗ ಸುತ್ತ ಇದ್ದ ಪೊಲೀಸ್ ಸಿಬ್ಬಂದಿ ಕಣ್ಣಗಳು ತುಂಬಿ ಬಂದಿತ್ತು. ಆಂಧ್ರ ಪೊಲೀಸರು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ಅಪರೂಪದ ಕ್ಷಣವನ್ನು ಶೇರ್ ಮಾಡಿದ್ದಾರೆ. ಅಪ್ಪ – ಮಗಳಿಗೆ ಪ್ರಶಂಸೆಯ ಮಳೆ ಸುರಿಯುತ್ತಿದೆ.
ಆಂಧ್ರಪ್ರದೇಶ ರಾಜ್ಯ ಪೊಲೀಸ್ ಆಯೋಜಿಸಿದ್ದ 'ಇಗ್ನೈಟ್' ಎಂಬ ಸಭೆಯಲ್ಲಿ ಭಾಗವಹಿಸಲು ಅಪ್ಪ-ಮಗಳು ತಿರುಪತಿಗೆ ಬಂದಿದ್ದರು.
ಆಂಧ್ರ ಪೊಲೀಸರು ಆ ಅಪರೂಪದ ಕ್ಷಣ ಸೆರೆ ಹಿಡಿದು ಶೇರ್ ಮಾಡಿದ್ದಾರೆ. ಜೊತೆಗೊಂದು ಟ್ವೀಟ್ ಸಂದೇಶ ಕೂಡಾ ರವಾನಿಸಿದ್ದಾರೆ. “ ಪೊಲೀಸ್ ಡ್ಯೂಟಿ ಮೀಟ್ ಪರಿವಾರವನ್ನು ಒಂದಾಗಿಸುತ್ತದೆ. ಸರ್ಕಲ್ ಇನ್ಸ್ ಪೆಕ್ಟರ್ ಶ್ಯಾಂ ಸುಂದರ್ ತನ್ನ ಪುತ್ರಿ ಹಾಗೂ ಡಿಎಸ್ ಪಿ ಆಗಿರುವ ಜೆಸ್ಸಿ ಪ್ರಶಾಂತಿಗೆ ಹೆಮ್ಮೆ ಮತ್ತು ಗೌರವದೊಂದಿಗೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ.
ಶ್ಯಾಮ್ ಸುಂದರ್ ತಮ್ಮ ಮಗಳನ್ನು ನೋಡಿ ಭಾವುಕರಾದರು. ನಂತರ ಮಗಳ ಬಳಿಗೆ ಹೋಗಿ 'ನಮಸ್ತೆ ಮೇಡಂ' ಎಂದು ಹೆಮ್ಮೆಯಿಂದ ನಮಸ್ಕರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಜೆಸ್ಸಿ ಪ್ರಶಾಂತಿ ಕೂಡ ಹಿಂತಿರುಗಿ 'ಧನ್ಯವಾದಗಳು, ಅಪ್ಪ' ಎಂದು ಹೇಳಿದರು.
Zee Media ಬಳಿ ಮಾತನಾಡಿದ ಶ್ಯಾಮ್ ಸುಂದರ್, "ನನ್ನ ಮಗಳು ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾಳೆ ಮತ್ತು ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುತ್ತಾಳೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು. ಅದೇ ಸಮಯದಲ್ಲಿ, ತಿರುಪತಿ ನಗರ ಜಿಲ್ಲಾ ಎಸ್ಪಿ ಎ ರಮೇಶ್ ರೆಡ್ಡಿ, " ತನ್ನ ತಂದೆಯ ಕನಸು ನನಸಾಗಿಸಿದ್ದಕ್ಕಾಗಿ ಪ್ರಶಾಂತಿಯನ್ನು ಪ್ರಶಂಸಿಸುತ್ತೇನೆ ಎಂದು ಹೇಳಿದ್ದಾರೆ.