U19 Cricket World Cup: ವಿಶ್ವಕಪ್ ವಿಜೇತ ಪ್ರತಿಯೊಬ್ಬ ಆಟಗಾರನಿಗೆ 40 ಲಕ್ಷ ರೂ. ನಗದು ಬಹುಮಾನ!

ಮಹತ್ವದ ಫೈನಲ್ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆಯೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಟ್ವೀಟ್ ಮಾಡುವ ಮೂಲಕ ಆಟಗಾರರು, ಸಿಬ್ಬಂದಿ ಹಾಗೂ ಆಯ್ಕೆಗಾರರನ್ನು ಅಭಿನಂದಿಸಿದ್ದಾರೆ.

Written by - Puttaraj K Alur | Last Updated : Feb 6, 2022, 07:04 AM IST
  • ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ 5ನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಟೀಂ ಇಂಡಿಯಾ
  • ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ
  • ಪ್ರತಿಯೊಬ್ಬ ಆಟಗಾರರಿಗೂ ತಲಾ 40 ಲಕ್ಷ ರೂ. ಬಹುಮಾನ ಘೋಷಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
U19 Cricket World Cup: ವಿಶ್ವಕಪ್ ವಿಜೇತ ಪ್ರತಿಯೊಬ್ಬ ಆಟಗಾರನಿಗೆ 40 ಲಕ್ಷ ರೂ. ನಗದು ಬಹುಮಾನ!  title=
5ನೇ ಬಾರಿ ವಿಶ್ವಕಪ್ ಚಾಂಪಿಯನ್ ಆದ ಟೀಂ ಇಂಡಿಯಾ

ನವದೆಹಲಿ: ಟೀಂ ಇಂಡಿಯಾದ ಕಿರಿಯರ ತಂಡವು 5ನೇ ಬಾರಿಗೆ ವಿಶ್ವಕಪ್​ ಟ್ರೋಫಿ(U19 Cricket World Cup)ಗೆ ಮುತ್ತಿಕ್ಕಿದೆ. ನಿನ್ನೆ ನಡೆದ(ಫೆ.5) ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡ(Team India)ಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಐತಿಹಾಸಿಕ ಸಾಧನೆ ಮಾಡಿರುವ ತಂಡದ ಆಟಗಾರರಿಗೆ ಬಿಸಿಸಿಐ ನಗದು ಬಹುಮಾನ ಘೋಷಿಸಿದೆ.

ಮಹತ್ವದ ಫೈನಲ್ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆಯೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಮತ್ತು ಕಾರ್ಯದರ್ಶಿ ಜೈ ಶಾ(Jay Shah) ಟ್ವೀಟ್ ಮಾಡುವ ಮೂಲಕ ಆಟಗಾರರು, ಸಿಬ್ಬಂದಿ ಹಾಗೂ ಆಯ್ಕೆಗಾರರನ್ನು ಅಭಿನಂದಿಸಿದ್ದಾರೆ. ಇದರ ಜೊತೆಗೆ ತಂಡದ ಪ್ರತಿಯೊಬ್ಬ ಆಟಗಾರರಿಗೆ ತಲಾ 40 ಲಕ್ಷ ರೂ. ಹಾಗೂ ತಂಡದ ಸಿಬ್ಬಂದಿಗೆ ತಲಾ 25 ಲಕ್ಷ ರೂ. ನಗದು ಬಹುಮಾನ(BCCI Cash Reward) ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: IPL 2022 Mega Auction ನಲ್ಲಿ ಈ ಅನ್‌ಕ್ಯಾಪ್ಡ್ ಆಟಗಾರರನ್ನು ಖರೀದಿಸಲು ಭರ್ಜರಿ ಫೈಟ್!

5ನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಟೀಂ ಇಂಡಿಯಾ

ಆಂಟಿಗುವಾದಲ್ಲಿ ನಡೆದ ವಿಶ್ವಕಪ್ ಫೈನಲ್​ ಪಂದ್ಯ(U19 Cricket World Cup)ದಲ್ಲಿ ಇಂಗ್ಲೆಂಡ್(England) ವಿರುದ್ಧ 4 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ತಂಡವು 5ನೇ ಬಾರಿಗೆ ವಿಶ್ವ ಚಾಂಪಿಯನ್ ಆಯಿತು. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 44.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 189 ರನ್ ಗಳಿಸಿತು. ಭಾರತ 47.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಈ ಮೂಲಕ 5ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ಧರಿಸುವ ಮೂಲಕ ದಾಖಲೆ ಬರೆಯಿತು.

ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಆಟಗಾರರು(Team India) ಆಂಗ್ಲರಿಗೆ ಮಣ್ಣುಮುಕ್ಕಿಸುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾದ ಸಂಘಟನಾತ್ಮಕ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಆಟಗಾರರು ನಲುಗಿಹೋದರು. ಹೀಗಾಗಿ ಕೇವಲ 189 ರನ್ ಗಳಿಗೆ ಇಂಗ್ಲೆಂಡ್ ಸರ್ವಪತನ ಕಾಣಬೇಕಾಯಿತು. ಬ್ಯಾಟಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಭಾರತೀಯರು ಇಂಗ್ಲೆಂಡ್ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿ ಗೆಲುವಿನ ಗುರಿ ಮುಟ್ಟಿ ಸಂಭ್ರಮಿಸಿದರು.

ಇದನ್ನೂ ಓದಿ: 24 ವರ್ಷಗಳ ನಂತರ ಪಾಕ್ ಪ್ರವಾಸಕ್ಕೆ ಹೊರಟ ಆಸ್ಟ್ರೇಲಿಯಾ ಕ್ರಿಕೆಟ್ ತಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News