ಬೆಂಗಳೂರು : ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ(ಮೇ 15) ಪ್ರಕಟವಾಗಲಿದ್ದು, ಇಡೀ ದೇಶವೇ ಕರ್ನಾಟಕದ ಜನಾದೇಶಕ್ಕೆ ಕುತೂಹಲದಿಂದ ಎದುರುನೋಡುತ್ತಿದೆ.
2019ರ ಲೋಕಸಭಾ ಚುನಾವಣೆಗೆ ಭದ್ರ ಬುನಾದಿ ಎಂದೇ ಹೇಳಲಾಗುತ್ತಿರುವ ಕರ್ನಾಟಕ ಚುನಾವಣೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈಗಾಗಲೇ ಮತದಾರರ ಮತಗಳು ಮತಯಂತ್ರಗಳಲ್ಲಿ ಭದ್ರವಾಗಿದ್ದು, ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದೆ.
ಈಗಾಗಲೇ ಹಲವು ಸುದ್ದಿ ವಾಹಿನಿಗಳ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕೆಲವು ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದರೆ, ಮತ್ತೆ ಕೆಲವು ಬಿಜೆಪಿಗೆ ಪೂರ್ಣ ಬಹುಮತ ನೀಡಿದೆ. ಆದರೆ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಬಗ್ಗೆ ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹೀಗಾಗಿ ರಾಜ್ಯದ ಅಧಿಕಾರ ಕಾಂಗ್ರೆಸ್ ಪಾಲಾಗಲಿದೆಯೇ? ಬಿಜೆಪಿ ಪಾಲಾಗಲಿದೆಯೇ? ಅಥವಾ ಜೆಡಿಎಸ್ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗಲಿದೆಯೇ ಎಂಬುದು ನಾಳೆ ನಿರ್ಧಾರವಾಗಲಿದೆ.
ಕಾಂಗ್ರೆಸ್ ಬಹುಮತ ಪಡೆದರೆ!
ಒಂದು ವೇಳೆ ಕಾಂಗ್ರೆಸ್ ಬಹುಮತ ಪಡೆದಿದ್ದೇ ಆದಲ್ಲಿ ಈಗಾಗಲೇ 5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದರಲ್ಲಿ ಸಂದೇಹವಿಲ್ಲ. ಆದರೆ, ಸಿದ್ದರಾಮಯ್ಯ ಅವರು ಬಾದಾಮಿ ಹಾಗೂ ಚಾಮುಂಡೇಶ್ವರಿ ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಕಾಂಗ್ರೆಸ್ ಬಹುಮತ ಗಳಿಸದೇ ಇದ್ದಲ್ಲಿ, ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆಯಬೇಕಾಗುವ ಸನ್ನಿವೇಶ ಎದುರಾಗಲಿದೆ. ಈಗಾಗಲೇ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ಕುರಿತಾದ ಚರ್ಚೆಗಳು ಹೆಚ್ಚಾಗುತ್ತಿದ್ದು, ಕೆಪಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ಮಾಡುವ ಸಾಧ್ಯತೆಗಳೂ ಹೆಚ್ಚಾಗಿವೆ ಅಥವಾ ಲಿಂಗಾಯತ ಮತದಾರರನ್ನು ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಉಪಮುಖ್ಯಮಂತ್ರಿಯಾಗಿಸುವ ಸಾಧ್ಯತೆಯೂ ಇದೆ.
ಬಿಜೆಪಿ ಬಹುಮತ ಪಡೆಯದಿದ್ದರೆ!
ಮತ್ತೊಂದೆಡೆ ಬಿಜೆಪಿ ಕೂಡ ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸುವ ವಿಶ್ವಾಸ ಹೊಂದಿದೇ. ಅಷ್ಟೇ ಏಕೆ, ಮುಖ್ಯಮಂತ್ರಿ ಅಭ್ಯರ್ತಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲರಿಗಿಂತಲೂ ಒಂದು ಹೆಚ್ಚೇ ಮುಂದೆ ಹೋಗಿ ಫಲಿತಾಂಶಕ್ಕೂ ಮುನ್ನವೇ ಪ್ರಮಾಣವಚನ ಸ್ವೀಕರಿಸುವ ದಿನಾಂಕದ ಬಗ್ಗೆ ಮಾತನಾಡುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಪೂರ್ಣ ಬಹುಮತ ಪಡೆದರೆ ಪ್ರಬಲ ಲಿಂಗಾಯತ ಅಭ್ಯರ್ಥಿ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ, 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದಲಿತ ಮತಗಳನ್ನು ಸೆಳೆಯಲು ವಾಲ್ಮೀಕಿ ಸಮುದಾಯದ ನಾಯಕ ಬಿ.ಶ್ರೀರಾಮುಲು ಉಪ ಮುಖ್ಯಮಂತ್ರಿಯಾಗುವುದು ಖಂಡಿತ. ಒಂದು ವೇಳೆ ಹಲವು ಸಮೀಕ್ಷೆಗಳು ಹೇಳಿದಂತೆ ಬಿಜೆಪಿ 5-6 ಸ್ಥಾನಗಳ ಅಂತರದಿಂದ ಬಹುಮತ ಗಳಿಸುವಲ್ಲಿ ವಿಫಲವಾದರೆ, ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ಸರ್ಕಾರ ರಚಿಸುವುದರಲ್ಲಿ ಸಂದೇಹವಿಲ್ಲ. 2008ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯದ ಬಿಜೆಪಿ, ಆಪರೇಶನ್ ಕಮಲದ ಮೂಲಕ ವಿರೋಧ ಪಕ್ಷದ ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡಿದ್ದೀಗ ರಾಜ್ಯದ ರಾಜಕಾರಣದಲ್ಲೇ ದೊಡ್ಡ ಇತಿಹಾಸ.
ಕಿಂಗ್ ಮೇಕರ್ ಆಗಲಿದೆಯೇ ಜೆಡಿಎಸ್!
ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಹೆಸರು ಮಾಡಿರುವ ಜೆಡಿಎಸ್ ಕೂಡ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಆದರೂ, ಬಹುಮತ ಪಡೆಯುವ ಬಗ್ಗೆ ಅಳುಕಿದ್ದರೂ ತೋರಿಸಿಕೊಳ್ಳದ ಹೆಚ್.ಡಿ.ಕುಮಾರಸ್ವಾಮಿ ತಾವೂ ಮುಖ್ಯಮಂತ್ರಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಯಾವ ಪಕ್ಷವೂ ಬಹುಮತ ಗಳಿಸದೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ, ಇತರ ಪಕ್ಷದ ಜೊತೆ ಕೈಜೋಡಿಸಿ ಸರ್ಕಾರ ರಚಿಸುವ ಆಲೋಚನೆಯಲ್ಲಿ ಜೆಡಿಎಸ್ ಇದೆ. ಆದರೆ ಯಾವ ಪಕ್ಷದೊಂದಿಗೆ ಸರ್ಕಾರ ರಚಿಸಲಿದೆ ಎಂಬ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡದ ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡ ಅವರು, ಫಲಿತಾಂಶದ ನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಒಟ್ಟಾರೆ, ಈ ಮೂರೂ ಪಕ್ಷಗಳ ಭವಿಷ್ಯ ನಾಳೆ ನಿರ್ಧಾರವಾಗಲಿದ್ದು, ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂಬುದನ್ನು ನಾಳೆವರೆಗೆ ಕಾದುನೋಡಬೇಕಿದೆ. ಆದರೆ ಮೈತ್ರಿ ಸರ್ಕಾರದ ಸನ್ನಿವೇಶ ನಿರ್ಮಾಣವಾದರೆ ಫಲಿತಾಂಶೋತ್ತರ ರಾಜಕೀಯ ಚಟುವಟಿಕೆ ಬಿರುಸುಗೊಂಡು ರಾಜ್ಯವು ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ.