ವಿಶಿಷ್ಟ ಜನಪದ ಸಂಸ್ಕೃತಿ: ಡೊಳ್ಳು ಕುಣಿತ

'ಗಂಡು ಕಲೆ' ಎಂದು ಪ್ರಸಿದ್ದಿ ಪಡೆದಿರುವ ಕಲೆ. ಇತ್ತೀಚಿಗೆ ನಮ್ಮ ಹೆಣ್ಣು ಮಕ್ಕಳೂ ಡೊಳ್ಳು ಕುಣಿತವನ್ನು ಪ್ರದರ್ಶಿಸುತ್ತಾರೆ. 

Last Updated : Sep 11, 2017, 05:44 PM IST
ವಿಶಿಷ್ಟ ಜನಪದ ಸಂಸ್ಕೃತಿ: ಡೊಳ್ಳು ಕುಣಿತ  title=

ಡೊಳ್ಳು ಕುಣಿತ ಕರ್ನಾಟಕದ ಒಂದು ಜಾನಪದ ಕಲೆ. ಗ್ರಾಮೀಣ ಜನರ ಸಾಮಾನ್ಯ ಸಂಸ್ಕೃತಿಯೊಂದಿಗೆ, ಅವರ ಜೀವನದೊಂದಿಗೆ ಡೊಳ್ಳುಕುಣಿತ ಸಮರಸವಾಗಿ ಬೆರೆತುಹೋಗಿದೆ. ಡೊಳ್ಳನ್ನು ಕುರುಬ ಜನಾಂಗದ ವಾದ್ಯ ಎಂದೇ ಬಿಂಬಿಸಲಾಗಿದೆ. ಡೊಳ್ಳು ಕುಣಿತದ ಸಂದರ್ಭದಲ್ಲಿ ಬೀರದೇವರ ವರ್ಣನೆ ಮಾಡಲಾಗುತ್ತದೆ. ಬಹುತೇಕ ಹಾಡುಗಳು ಬೀರದೇವರ ಮಹಿಮೆಯನ್ನು ಕುರಿತಾಗಿಯೇ ಇರುತ್ತವೆ. 

ಡೊಳ್ಳು ಕುಣಿತವು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ಜನಪದ ಸಂಸ್ಕೃತಿ. ಅದರ ಮೌಖಿಕ ಸಂಪ್ರದಾಯದಲ್ಲಿ ಅಭಿವ್ಯಕ್ತ ಸಾಹಿತ್ಯವು 'ಹಾಲುಮತ ಪುರಾಣ' ಅಥವಾ ಕುರುಬ ಪುರಾಣ ಎಂಬ ದಂತಕಥೆಯ ಮೂಲಕ ಸಾಗುತ್ತದೆ. ಡೊಳ್ಳು ಎಂದು ಕರೆಯಲ್ಪಡುವ ಒಂದು ವಿಶೇಷ ವಾದ್ಯದ ಪರಿಕರವನ್ನು  ಉಪಯೋಗಿಸಿ ಮಾಡುವ ನೃತ್ಯವಾಗಿರುವುದರಿಂದ ಇದನ್ನು 'ಡೊಳ್ಳು ಕುಣಿತ' ಎಂದು ಕರೆಯಲಾಗುತ್ತದೆ. 

ಸಧೃಡ ಮೈಕಟ್ಟು ಹೊಂದಿರುವ ಕಲಾವಿದರು ಮಾತ್ರ ಈ ನೃತ್ಯವನ್ನು ಪ್ರದರ್ಶಿಸಲು ಸಾಧ್ಯ. ಎಲ್ಲರೂ ಇದನ್ನು 'ಗಂಡು ಕಲೆ' ಎಂತಲೂ ಕರೆಯುವುದು ಉಂಟು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಹೆಣ್ಣು ಮಕ್ಕಳು ಈ ಕಲೆ ಪ್ರದರ್ಶಿಸುವುದುಂಟು. 

ಇವರ ವೇಷ-ಭೂಷಣಗಳು ಆಕರ್ಷಕವಾಗಿರುತ್ತದೆ. ಸಾಮಾನ್ಯವಾಗಿ ನಾಲ್ಕು ಜನರು ಪ್ರದರ್ಶಿಸುವ ಈ ನೃತ್ಯದಲ್ಲಿ ಇಂತಿಷ್ಟೇ ಜನ ಪಾಲ್ಗೊಳ್ಳಬೇಕು ಎಂಬ ನಿಯಮವೇನೂ ಇಲ್ಲ. ಜಾಗಟೆ, ತಾಳ, ಕಹಳೆ ಮುಂತಾದ  ವಾದ್ಯಗಳೊಂದಿಗೆ ಪದ ಕಟ್ಟುತ್ತಾ ಒಂದು ಕೈಯಲ್ಲಿ ಡೊಳ್ಳು ಬಡಿಯುತ್ತಾ ಜೊತೆಜೊತೆಗೆ ಕುಣಿಯುತ್ತಾ ಜನರಲ್ಲಿ ರೋಮಾಂಚನ  ಉಂಟುಮಾಡುವ ಅದ್ಭುತ ನೃತ್ಯ ಕಲೆ ಇದಾಗಿದೆ.

Trending News