ಬೆಂಗಳೂರು: ಕಿಚ್ಚ ರಾಜಕೀಯ ಪ್ರವೇಶಿಸಲಿದ್ದಾರೆಯೇ? ಕಿಚ್ಚನ ಚಿತ್ತ ಜೆಡಿಎಸ್ ನತ್ತ ಇದೆಯೇ ಎಂಬ ಹತ್ತು ಹಲವಾರು ಪ್ರಶ್ನೆಗಳು ಈಗಾಗಲೇ ಹಲವರ ಮನಸ್ಸಲ್ಲಿ ಮೂಡಿದೆ. ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದು, ಕುಮಾರಣ್ಣನ ಹುಟ್ಟುಹಬ್ಬ.
ಹೌದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗಷ್ಟೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಆ ದಿನ ಕಿಚ್ಚ ಸುದೀಪ್ ಶುಭಾಶಯ ಸಹ ಕೋರಿದ್ದರು. ಅಲ್ಲದೆ, ಡಿ.17 ರಂದು ಕುಮಾರಣ್ಣ ಕಿಚ್ಚನ ಕೈ ಪಾಕ ಸಹ ಸವಿದಿದ್ದರು. ಅಲ್ಲದೆ ಸುಮಾರು ಎರಡು ಗಂಟೆಗಳ ಕಾಲ ಆತ್ಮೀಯ ಮಾತುಕತೆಯನ್ನು ನಡೆಸಿದ್ದು ಬಹುತೇಕ ರಾಜಕಾರಣಿ ಮತ್ತು ಚಿತ್ರರಂಗದವರನ್ನು ಹುಬ್ಬೆರಿಸುವಂತೆ ಮಾಡಿತ್ತು.
ಭೋಜನದ ವೇಳೆ ಜೆಡಿಎಸ್ ಗೆ ಬರುವಂತೆ ನಟ ಸುದೀಪ್ ರಿಗೆ ಕುಮಾರಣ್ಣ ಆಹ್ವಾನ ನೀಡಿದ್ದರಂತೆ, ಜೆಡಿಎಸ್ ಗೆ ಬರುವ ಯೋಚಿಸಲು ಕೆಲವು ದಿನಗಳ ಕಾಲಾವಕಾಶ ನೀಡವಂತೆ ಕಿಚ್ಚ ಸುದೀಪ್ ಕೇಳಿದ್ದಾರೆ ಎಂಬ ಊಹಾಪೋಹಗಳು ಎಲ್ಲೆಡೆ ಹಬ್ಬಿದೆ.
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಿಚ್ಚ ತಮಗೆ ರಾಜಕೀಯಕ್ಕೆ ಸೇರುವ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಕುಮಾರಣ್ಣನ ಹುಟ್ಟುಹಬ್ಬದ ನಂತರ, ಕಿಚ್ಚ ನಿಜವಾಗಿಯೂ ರಾಜಕಾರಣಕ್ಕೆ ಬರುತ್ತಾರೆಯೇ? ಅವರ ಆಯ್ಕೆ ಜೆಡಿಎಸ್ ಪಕ್ಷವೇ ಎಂಬ ಕುತೂಹಲಕಾರಿ ಪ್ರಶ್ನೆಗಳು ಕೇಳಿಬರುತ್ತಿವೆ. ಇದಕ್ಕೆ ಕಿಚ್ಚ ತಾವಾಗಿಯೇ ಉತ್ತರಿಸಬೇಕಿದೆ. ಅಲ್ಲಿಯವರೆಗೂ ಇಂತಹ ಊಹಾಪೋಹಗಳು ಹರಿದಾಡುತ್ತಲೇ ಎನ್ನುವುದಂತೂ ಸತ್ಯ.