Puneet Parva : ಕನ್ನಡಿಗರ ಎದೆಯಾಳುವ ದೊರೆ ನಟ ಪುನೀತ್ ರಾಜ್ ಕುಮಾರ್ ಅಗಲಿ ಇದೇ ತಿಂಗಳ 29ಕ್ಕೆ ಒಂದು ವರ್ಷ ಕಳೆಯಲಿದೆ. ಅಪ್ಪು ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್‌ಗೆ ಭರದ ಸಿದ್ಧತೆ ನಡೆಯುತ್ತಿದೆ. ಅಪ್ಪು ಇಹಲೋಕದಿಂದ ಮರೆಯಾಗಿದ್ದರೂ ಕನ್ನಡಿಗರ ನರ ನಾಡಿಗಳಲ್ಲಿ ಅಜರಾಮರರು. ಅಪ್ಪು ಅವರ ಕನಸಿನ ಕೂಸು ಅವರ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ : Anushka Sharma : ಟೀಂ ಇಂಡಿಯಾ ಜೆರ್ಸಿ ತೊಟ್ಟು ಗ್ರೌಂಡ್‌ಗಿಳಿದ ಅನುಷ್ಕಾ ಶರ್ಮಾ!
ನಟ ಪುನೀತ್ ಕೊನೆಯ ಸಿನಿಮಾ 'ಗಂಧದ ಗುಡಿ' ಪ್ರೀ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ʻಪುನೀತ್ ಪರ್ವʼ ಹೆಸರಿನಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಸ್ಯಾಂಡಲ್ ವುಡ್ ಮತ್ತು ಪರಭಾಷೆಯ ಕಲಾವಿದರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅನೇಕ ಸಿನಿ ಗಣ್ಯರಿಗೆ ಈಗಾಗಲೇ ರಾಜ್ ಕುಟುಂಬದಿಂದ ಆಹ್ವಾನ ನೀಡಲಾಗಿದೆ. ಅಕ್ಟೋಬರ್ 21 ರಂದು ಪುನೀತ್ ಪರ್ವ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ರಾಜ್ ಕುಟುಂಬ ಸುದ್ಧಿಗೋಷ್ಠಿ ನಡೆಸಿದ್ದು ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನಟ ರಾಘವೇಂದ್ರ ರಾಜ್ ಕುಮಾರ್, ಈ ಕಾರ್ಯಕ್ರಮ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಅವರ ಮುಂದಾಳತ್ವದಲ್ಲಿ ನಡೆಯುತ್ತಿದೆ. ಪುನೀತ್ ಗಂಧದ ಗುಡಿಯನ್ನು ಬಹಳ ಪ್ರೀತಿಯಿಂದ ತಯಾರಿಸಿದ್ದಾರೆ. ದೇವರು ಈ ಸಿನಿಮಾ ಮುಗಿಸಿ ಹೋಗಲು ಅಪ್ಪುಗೆ ಅವಕಾಶ ಕೊಟ್ಟ. ಗಂಧದ ಗುಡಿ ಕಾರ್ಯಕ್ರಮ ಒಂದು ಸೆಲೆಬ್ರೇಷನ್ ಆಗಿದೆ. ಅಪ್ಪು ನಮ್ಮೊಂದಿಗೆ ಇದ್ದಿದ್ದರೆ ಎಷ್ಟು ಚೆನ್ನಾಗಿ ಮಾಡುತ್ತಿದ್ದನೋ ಅದಕ್ಕಿಂತ ಚೆನ್ನಾಗಿ ನಾವು ಈ ಕಾರ್ಯಕ್ರಮ ಮಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ಹಾಡು, ಡಾನ್ಸ್ ಎಲ್ಲವೂ ಇರಲಿದೆ ಎಂದು ಹೇಳಿದರು.
ಯಶ್, ಸೂರ್ಯ, ಬಾಲಯ್ಯ, ರಾಣ ದಗ್ಗುಭಾಟಿ ಸೇರಿದಂತೆ ಅನೇಕ ಸಿನಿ ಗಣ್ಯರು ಬರುತ್ತಾರೆ. ಕಾರ್ಯಕ್ರಮದಲ್ಲಿ ಎಲ್ಲಾ ಚಿತ್ರರಂಗದ ಗಣ್ಯರು ಸೇರಲಿದ್ದಾರೆ. ಈ ಕಾರ್ಯಕ್ರಮ ಕಣ್ಣಿಗೆ ಹಬ್ಬದ ಹಾಗೆ ಇರುತ್ತದೆ. ಇದನ್ನ ನಿಮಗಾಗೆ ಮಾಡುತ್ತಿದ್ದೇವೆ, ನಿಮಗೆ ತಲುಪಿಸೋದು ನಮ್ಮ ಧರ್ಮವಾಗಿದೆ. ಅಪ್ಪು ಯಾರೊಬ್ಬರ ಸ್ವತ್ತಲ್ಲ. ಅವನು ಇಡೀ ಕರ್ನಾಟಕದ ಸ್ವತ್ತು. ಈ ಈವೆಂಟ್‌ನ ಓನರ್ ಶಿಪ್ ಎಲ್ಲರಿಗೂ ತಲುಪುತ್ತೆ ಎಂದರು.
ಇದನ್ನೂ ಓದಿ : ಕಾಂತಾರದಲ್ಲಿ ಹೇಳಿದ್ದು ಸುಳ್ಳು, ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ : ಚೇತನ್ ಅಹಿಂಸಾ
ಈ ವೇಳೆ ಗಂಧದಗುಡಿ ನಿರ್ದೇಶಕ ಅಮೋಘ ವರ್ಷ ಕೂಡ ಜೊತೆಯಲ್ಲಿದ್ದರು. ನಿನ್ನೆಯಿಂದಲೇ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರಲು ಶುರು ಮಾಡಿದ್ದಾರೆ. ದೂರದಿಂದ ಬರುವ ಫ್ಯಾನ್ಸ್‌ಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ನಡೆಯುತ್ತಿದೆ. ಅಪ್ಪಾಜಿ ಬಗ್ಗೆ ಒಂದು ಪುಸ್ತಕ ಬರೆದ ಪುನೀತ್, ಈಗ ಗಂಧದ ಗುಡಿ ಸಿನಿಮಾ ಮೂಲಕ ಜನರಿಗೆ ಏನೋ ಹೇಳೋಕೆ ಹೊರಟಿದ್ದಾರೆ ನೋಡಬೇಕು. ಎಷ್ಟೇ ಜನ ಈ ಕಾರ್ಯಕ್ರಮಕ್ಕೆ ಬಂದರು ಸಹ ಅವರಿಗೆ ವ್ಯವಸ್ಥೆ ಮಾಡುವ ಕೆಲಸ ನಮ್ಮದು ಎಂದು ರಾಘಣ್ಣ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ