ಪಿ. ಚಿದಂಬರಂ ಆರೋಗ್ಯ ತಪಾಸಣೆ ನಡೆಸಿ ನಾಳೆಯೇ ವರದಿ ಸಲ್ಲಿಸಿ: ಏಮ್ಸ್‌ಗೆ ದೆಹಲಿ ಹೈಕೋರ್ಟ್

ಅನಾರೋಗ್ಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಸಲ್ಲಿಸಿದ್ದ ಅರ್ಜಿ ಆಲಿಸಿದ ದೆಹಲಿಯ ಉಚ್ಚ ನ್ಯಾಯಾಲಯ.  

Yashaswini V Yashaswini V | Updated: Oct 31, 2019 , 01:19 PM IST
ಪಿ. ಚಿದಂಬರಂ ಆರೋಗ್ಯ ತಪಾಸಣೆ ನಡೆಸಿ ನಾಳೆಯೇ ವರದಿ ಸಲ್ಲಿಸಿ: ಏಮ್ಸ್‌ಗೆ ದೆಹಲಿ ಹೈಕೋರ್ಟ್
Photo Courtesy: DNA

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ದೆಹಲಿ ಹೈಕೋರ್ಟ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಸೂಚಿಸಿದೆ. 

ಮಂಡಳಿಯು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ನಾಳೆ ಮಧ್ಯಾಹ್ನದೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಸಲ್ಲಿಸಿದ್ದ ಅರ್ಜಿ ಆಲಿಸಿದ ದೆಹಲಿಯ ಉಚ್ಚ ನ್ಯಾಯಾಲಯ ಬಳಿಕ ಈ ಆದೇಶ ನೀಡಿದೆ.

ಚಿದಂಬರಂ (74) ಅವರಿಗೆ ಸೋಮವಾರ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡಿದ್ದ ರಿಂದ ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸಂಜೆ ವೇಳೆಗೆ ಚಿದಂಬರಂ ಅವರನ್ನು ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಐಎನ್‌ಎಕ್ಸ್ ಮೀಡಿಯಾ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರೋಗ್ಯದ ಕಾರಣಕ್ಕಾಗಿ ಮೂರು ದಿನಗಳ ಕಾಲ ಮಧ್ಯಂತರ ಜಾಮೀನು ಕೋರಿ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಗುರುವಾರ ದೆಹಲಿ ಹೈಕೋರ್ಟ್‌ಗೆ ಮೊರೆಹೋದರು. ಚಿದಂಬರಂ ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆಯಲು ಹೈದರಾಬಾದ್ ಗೆ ತೆರಳಲು ಅವಕಾಶ ಮಾಡಿಕೊಂಡುವಂತೆ ಜಾಮೀನು ಕೋರಿದ್ದರು. ಚಿದಂಬರಂ ಅವರ ಅರ್ಜಿಯನ್ನು ಹಿರಿಯ ನ್ಯಾ. ಕಪಿಲ್ ಸಿಬಲ್ ಅವರು ಮುಖ್ಯ ನ್ಯಾ. ಡಿ.ಎನ್. ಪಟೇಲ್ ಮತ್ತು ನ್ಯಾ. ಸಿ. ಹರಿಶಂಕರ್ ಅವರ ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದ್ದಾರೆ.

"ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಚಿದಂಬರಂ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದೆ. ಅವರು ಕ್ರೋನ್ಸ್(ಕರುಳಿನ ಉರಿಯೂತ ಕಾಯಿಲೆ ಎನ್ನಲಾಗುತ್ತದೆ) ಕಾಯಿಲೆಯಿಂದ ಬಳಲುತ್ತಿದ್ದು, ತಕ್ಷಣವೇ ಸೂಕ್ತ ಚಿಕಿತ್ಸೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಅರ್ಜಿ ಆಲಿಸಿದ ನ್ಯಾಯಪೀಠ ಇಂದೇ ಪಿ. ಚಿದಂಬರಂ ಅವರ ಆರೋಗ್ಯ ತಪಾಸಣೆ ನಡೆಸಿ ನಾಳೆ ವರದಿ ಸಲ್ಲಿಸುವಂತೆ ಏಮ್ಸ್ ಆಸ್ಪತ್ರೆಗೆ ನಿರ್ದೇಶನ ನೀಡಿದೆ.

ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಚಿದಂಬರಂ ಅವರ ಆರೋಗ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಹೈದರಾಬಾದ್ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ - ಡಾ.ನಾಗೇಶ್ವರ ರೆಡಿ ಅವರನ್ನು ಏಮ್ಸ್ ಮಂಡಳಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ. ಡಾ. ರೆಡ್ಡಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಮಂಡಳಿಯು ತನ್ನ ಅಭಿಪ್ರಾಯವನ್ನು ತಿಳಿಸುವಂತೆ ನ್ಯಾಯಾಲಯ ತಿಳಿಸಿದೆ.