ನವದೆಹಲಿ: ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ಸಮ ಪ್ರಮಾಣದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಲೋಕಸಭೆ ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎನ್ನುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿ ಮೂಲಕ ಉಭಯ ಪಕ್ಷದ ನಾಯಕರು ಈ ಸಮಾನ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿಖರ ಸಂಖ್ಯೆಯನ್ನು ಮುಂದಿನ ಕೆಲವೇ ದಿನಗಳಲ್ಲಿ ಘೋಷಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದರು. ಜೆಡಿಯು ಅಲ್ಲದೆ ಇತರ ಬಿಹಾರದ ಪಕ್ಷಗಳಾದ ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಮತ್ತು ರಾಮವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಎನ್ಡಿಎ ಭಾಗವಾಗಿಯೇ ಉಳಿಯಲಿವೆ ಎಂದು ಶಾ ಸ್ಪಷ್ಟಪಡಿಸಿದರು.
ಒಂದು ಮೂಲದ ಪ್ರಕಾರ ಒಟ್ಟು 40 ಲೋಕಸಭಾ ಸೀಟ್ ನಲ್ಲಿ ಅದರಲ್ಲಿ 32 ರಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನವಾಗಿ ಸೀಟುಗಳನ್ನು ಹಂಚಿಕೆ ಮಾಡಿಕೊಳ್ಳಲಿವೆ ಉಳಿದ ಎಂಟು ಸೀಟುಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಲಿವೆ ಎಂದು ತಿಳಿದು ಬಂದಿದೆ. ಈ ಚರ್ಚೆಗೂ ಮುನ್ನ ನಿತೀಶ್ ಕುಮಾರ್ ತಮ್ಮ ಪಕ್ಷಕ್ಕೆ ಸಮಾನ ಸಂಖ್ಯೆ ಹಂಚಿಕೆಯಾಗಬೇಕೆಂದು ಹೇಳಿದ್ದರು ಎಂದು ಜೀ ನ್ಯೂಸ್ ಗೆ ಮೂಲಗಳು ತಿಳಿಸಿದ್ದವು.