ನವದೆಹಲಿ: ಮಂಗಳವಾರದಂದು ಉತ್ತರಪ್ರದೇಶ ಮತ್ತು ದೆಹಲಿಯ ಗಡಿ ಪ್ರದೇಶದಲ್ಲಿ ರೈತರು ನಡೆಸಿದ ಬೃಹತ್ ಪ್ರತಿಭಟನೆಗೆ ಬೆದರಿದ ಮೋದಿ ಸರ್ಕಾರ ಈಗ 2018-19 ರ ಅವಧಿಯ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಡುವ ತೀರ್ಮಾನಕ್ಕೆ ಬಂದಿದೆ.
ಈ ವಿಚಾರವಾಗಿ ಬುಧುವಾರದಂದು ಸಭೆ ಸೇರಿದ ಕ್ಯಾಬಿನೆಟ್ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಡುವ ನಿರ್ಧಾರವನ್ನು ತಗೆದುಕೊಂಡಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಕನಿಷ್ಟ ಬೆಂಬಲ ದರವನ್ನು ಪ್ರತಿ ಕ್ವಿಂಟಾಲ್ ಗೆ ಗೋದಿಗೆ 105, ಕುಸುಬಿಗೆ 845 ರೂ ಮತ್ತು ಧಾನ್ಯಗಳಿಗೆ 220 ರೂದಂತೆ ಕನಿಷ್ಠ ಬೆಂಬಲ ದರವನ್ನು ಹೆಚ್ಚಿಸಿದೆ.
ಕೃಷಿ ಸಲಹಾ ಮಂಡಳಿ ಸಿಎಸಿಪಿ ಶಿಫಾರಸುಗಳಿಗೆ ಅನುಗುಣವಾಗಿ ಎಂಎಸ್ಪಿ ಹೆಚ್ಚಾಗಿದೆ ಮತ್ತು ರೈತರಿಗೆ ಉತ್ಪಾದನೆಯ ವೆಚ್ಚಕ್ಕಿಂತ 50 ಪ್ರತಿಶತದಷ್ಟು ಲಾಭವನ್ನು ನೀಡುವ ಸರ್ಕಾರದ ಘೋಷಣೆ ಅನುಸಾರವಾಗಿ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ .
ರೈತರಿಗೆ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ನೆರವಾಗಲಿದೆ.ಉತ್ಪಾದನೆ ವೆಚ್ಚಕ್ಕಿಂತ ಕನಿಷ್ಠ ಶೇ. 50 ರಷ್ಟು ಬೆಳೆಗಳ ಎಮ್ಎಸ್ಪಿ ಹೆಚ್ಚಿಸುವ ಮೂಲಕ 62,635 ಕೋಟಿ ರೂ ರೈತರಿಗೆ ಹೆಚ್ಚುವರಿಯಾಗಿ ಮರಳಲಿದೆ ಎಂದು ಕ್ಯಾಬಿನೆಟ್ ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರ ಪ್ರದೇಶ ಗಡಿಯನ್ನು ದಾಟಿ ದೆಹಲಿಗೆ ಬಂದಿದ್ದ ಹತ್ತು ದಿನಗಳ ಕಿಸಾನ್ ಕ್ರಾಂತಿ ಯಾತ್ರೆಯಲ್ಲಿ ಉತ್ತರ ಭಾರತದ ಹರ್ಯಾಣ, ಉತ್ತರಪ್ರದೇಶ, ಪಂಜಾಬ್,ಉತ್ತರ ಖಂಡ ದಿಂದ ಬಂದಿದ್ದ ರೈತರ ಮೇಲೆ ಪೊಲೀಸರು ಲಾಟಿ ಚಾರ್ಜ್ ಅಶ್ರುವಾಯು ದಾಳಿಯನ್ನು ಕೈಕೊಂಡಿದ್ದರು. ಈ ಹಿನ್ನಲೆಯಲ್ಲಿ ಈಗ ಸರ್ಕಾರ ದೇಶದಾದ್ಯಂತ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು. ಗಾಂಧಿ ಜಯಂತಿಯಂದು ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ಬಂದಿರುವ ಹಿನ್ನಲೆಯಲ್ಲಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಇನ್ನ್ನೇನು ಕೆಲವೇ ತಿಂಗಳಲ್ಲಿ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಇರುವುದರಿಂದ ಈಗ ಮೋದಿ ಸರ್ಕಾರ ರೈತರ ಲಾಭಿಗೆ ಬೆದರಿದೆ ಎನ್ನಬಹುದು.