ನವದೆಹಲಿ : ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿಗೆ ಕಾರಣರಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75 ನೇ ಜನ್ಮದಿನವನ್ನು ಅದ್ಧೂರಿಯಿಂದ ಆಚರಿಸಲು ಕಾಂಗ್ರೆಸ್ ಪಕ್ಷ ಸಿದ್ಧತೆ ನಡೆಸಿದೆ.
ಇದೇ ಆಗಸ್ಟ್ 20ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹುಟ್ಟುಹಬ್ಬವಾಗಿದ್ದು ಅಂದು ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಈಗಾಗಲೇ ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೂ ಈ ಸಂದೇಶ ರವಾನಿಸಿದೆ.
ರಾಜೀವ್ ಗಾಂಧಿ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಯಾವ್ಯಾವ ನಾಯಕರು ಯಾವ್ಯಾವ ಜವಾಬ್ದಾರಿ ವಹಿಸಿಕೊಳ್ಳಬೇಕು? ಹೇಗೆ ಸಿದ್ಧತೆ ಮಾಡಬೇಕು ಎಂಬುದನ್ನು ಚರ್ಚಿಸಲು ಮಂಗಳವಾರ ರಾತ್ರಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಆಗಸ್ಟ್ 20 ರಂದು ದೇಶಾದ್ಯಂತ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ದೆಹಲಿಯಲ್ಲಿ ಆಗಸ್ಟ್ 22ರಂದು ಅದ್ಧೂರಿ ಸಮಾರಂಭ ಹಮ್ಮಿಕೊಳ್ಳುವುದಕ್ಕೂ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಕಾರ್ಯಕರ್ತರು ಪಕ್ಷ ಸಂಘಟನೆ ಬಗ್ಗೆ ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ರಾಜೀವ್ ಗಾಂಧಿಯವರ ಹುಟ್ಟುಹಬ್ಬ ಆಚರಣೆಯ ಮೂಲಕ ಮತ್ತೆ ಕಾರ್ಯಕರ್ತರು ಸಾರ್ವಜನಿಕರನ್ನು ತಲುಪಿ, ಪಕ್ಷ ಬಲವರ್ಧನೆ ಮುಂದಾಗುವಂತೆ ಮಾಡಲು ಈ ರೀತಿಯ ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರತಿ ರಾಜ್ಯದ, ಜಿಲ್ಲೆ, ಬ್ಲಾಕ್ ಮಟ್ಟದಲ್ಲಿ ಸಾಮಾನ್ಯ ಜನರೊಂದಿಗೆ ಹೆಚ್ಚೆಚ್ಚು ಸಂಪರ್ಕದಲ್ಲಿರಿ. ಪ್ರತಿದಿನದ ಆಗುಹೋಗುಗಳನ್ನು ಗಮನಿಸಿ. ರಕ್ತದಾನ ಶಿಬಿರ, ಸಸಿ ನೆಡುವಿಕೆಯಂತಹ ಸಾಮಾಜಿಕ ಕೆಲಸಗಳನ್ನು ಕೈಗೊಳ್ಳಿ. ಜನರೊಂದಿಗೆ ಚರ್ಚಾ ಸಭೆ, ಸಮ್ಮೇಳನಗಳನ್ನು ಏರ್ಪಿಡಿಸಿ ಎಂದು ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಈಗಾಗಲೇ ಸೂಚಿಸಿದ್ದಾರೆ.