ಸಾವರ್ಕರ್ ವಿಷಯದಲ್ಲಿ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿ: ಮಾಯಾವತಿ

ಸಾವರ್ಕರ್ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸ್ಥಿತಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿರುವ ಮಾಯಾವತಿ, ಒಂದು ವೇಳೆ ಪಕ್ಷ ತನ್ನ ಸ್ಥಿತಿ ಸ್ಪಷ್ಟಪಡಿಸದೇ ಹೋದಲ್ಲಿ ಇದನ್ನು ಕೇವಲ ನಾಟಕ ಎಂದೇ ಪರಿಗಣಿಸಲಾಗುವುದು ಎಂದಿದ್ದಾರೆ.

Updated: Dec 15, 2019 , 02:52 PM IST
ಸಾವರ್ಕರ್ ವಿಷಯದಲ್ಲಿ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿ: ಮಾಯಾವತಿ

ಮುಂಬೈ:ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸ್ವಾತಂತ್ರ್ಯ ವೀರ ದಾಮೋದರ್ ಸಾವರ್ಕರ್ ಕುರಿತು ನೀಡಿರುವ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದೀಗ ಈ ವಿವಾದದಲ್ಲಿ BSP ಅಧಿನಾಯಕಿ ಮಾಯಾವತಿ ಕೂಡ ಇಳಿದಿದ್ದಾರೆ. ಈ ವಿವಾದದಲ್ಲಿ ಮಾಯಾವತಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರವಿವಾರ ಸರಣಿ ಟ್ವೀಟ್ ಮಾಡಿರುವ ಮಾಯಾವತಿ ಇದು ಮಾಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆ ಸರ್ಕಾರ ರಚಿಸಿರುವ ಕಾಂಗ್ರೆಸ್ ಪಕ್ಷದ ಇಬ್ಬಗೆಯ ನಿಲುವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ. "ಇಂದಿಗೂ ಕೂಡ ಶಿವಸೇನೆ ಸಾವರ್ಕರ್ ಬಗ್ಗೆ ಸ್ಪಷ್ಟ ನಿಲುವು ಹೊಂದಿದೆ. ಆದ್ದರಿಂದ ಅದು ಪೌರತ್ವ ತಿದ್ದುಪಡಿ ಮಸೂದೆ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದೆ ಹಾಗೂ ಸಾವರ್ಕರ್ ಕುರಿತು ಕಾಂಗ್ರೆಸ್ ಹೊಂದಿರುವ ನಿಲುವಿಗೆ ಅಸಹನೆ ವ್ಯಕ್ತಪಡಿಸಿದೆ" ಎಂದಿದ್ದಾರೆ. 

ಇದೇ ವೇಳೆ ಸಾವರ್ಕರ್ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸ್ಥಿತಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿರುವ ಮಾಯಾವತಿ, ಒಂದು ವೇಳೆ ಪಕ್ಷ ತನ್ನ ಸ್ಥಿತಿ ಸ್ಪಷ್ಟಪಡಿಸದೇ ಹೋದಲ್ಲಿ ಇದನ್ನು ಕೇವಲ ನಾಟಕ ಎಂದೇ ಪರಿಗಣಿಸಲಾಗುವುದು ಎಂದಿದ್ದಾರೆ.

ಇದಕ್ಕೂ ಮೊದಲು ಶನಿವಾರ ಶಿವಸೇನೆಯನ್ನು ಗುರಿಯಾಗಿಸಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್, "ಅಧಿಕಾರದಲ್ಲಿ ಉಳಿದುಕೊಳ್ಳಲು ಶಿವಸೇನೆಗೆ ಎಂಥಹ ಜನರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಪ್ರಸಂಗ ಎದುರಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ" ಎಂದಿದ್ದರು. ವೀರ ಸಾವರ್ಕರ್ ಅವರ ಅವಮಾನ ಇಡೀ ದೇಶ ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರ ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ಮೊದಲು ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದ ಶಿವಸೇನೆ ಇದೀಗ ಮೃದು ಧೋರಣೆ ಏಕೆ ತಳೆದಿದೆ ಎಂದು ಪಡ್ನವಿಸ್ ಪ್ರಶ್ನಿಸಿದ್ದಾರೆ.

ರಾಹುಲ್ ಹೇಳಿಕೆ ನಾಚಿಕೆಗೇಡಿನ ಹೇಳಿಕೆಯಾಗಿದ್ದು, ಇದು ಸಾವರ್ಕರ್ ಕುರಿತು ರಾಹುಲ್ ಅವರಿಗೆ ಮಾಹಿತಿಯೇ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಅವರಿಗೆ 12 ವರ್ಷಗಳ ಕಠಿಣ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಅಲ್ಲಿ ರಾಹುಲ್ 12 ಗಂಟೆಗಳನ್ನು ಕಳೆಯಲಾರರು. ಕೇವಲ 'ಗಾಂಧಿ' ಹೆಸರನ್ನು ತಮ್ಮ ಹೆಸರಿಗೆ ಜೋಡಿಸುವುದರಿಂದ ನೀವು ಗಾಂಧಿಯಾಗಲು ಸಾಧ್ಯವಿಲ್ಲ ಎಂದು ಫಾಡ್ನವಿಸ್ ವಾಗ್ದಾಳಿ ನಡೆಸಿದ್ದಾರೆ.

ಶಿವಸೇನಾ ನಿಲುವು ಏನು?
ತಮ್ಮ ಮಿತ್ರಪಕ್ಷ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಶಿವಸೇನಾ ಮುಖಂಡ ಸಂಜಯ್ ರಾವುತ್, "ನಾವು ಮಹಾತ್ಮಾ ಗಾಂಧಿ ಹಾಗೂ ಪಂಡಿತ್ ನೆಹರು ಅವರನ್ನು ಗೌರವಿಸುತ್ತೇವೆ. ದಯವಿಟ್ಟು ವೀರ ಸಾವರ್ಕರ್ ಅವರನ್ನು ಅವಮಾನಿಸಬೇಡಿ. ಬುದ್ಧಿ ಹೊಂದಿರುವ ವ್ಯಕ್ತಿಗಳಿಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ" ಎಂದಿದ್ದರು.

ರಾಹುಲ್ ಗಾಂಧಿ ಹೇಳಿಕೆ
ದೆಹಲಿಯ ರಾಮಲೀಲಾ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ 'ಭಾರತ ಬಚಾವೋ' ಜಾಥಾದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ "ನಿನ್ನೆ ಸಂಸತ್ತಿನಲ್ಲಿ ಬಿಜೆಪಿ ಮುಖಂಡರು ನನಗೆ ಕ್ಷಮೆಯಾಚಿಸಲು ಒತ್ತಾಯಪಡಿಸುತ್ತಿದ್ದರು. ಆದರೆ ನಾನು ಅವರಿಗೆ ಹೇಳಲು ಬಯಸುವೆ 'ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ, ನಾನು ರಾಹುಲ್ ಗಾಂಧಿ ಆಗಿದ್ದೇನೆ'. ನಿಜ ಹೇಳಿದ್ದೇನೆ. ಅದಕ್ಕಾಗಿ ಕ್ಷಮೆಯಾಚಿಸುವುದಿಲ್ಲ" ಎಂದಿದ್ದರು.

ರಾಹುಲ್ ಹೇಳಿಕೆಯ ಉದ್ದೇಶವೇನು?
ನವೆಂಬರ್ 14, 1913ರಲ್ಲಿ  ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆದಿದ್ದ ಹಿಂದುತ್ವವಾದಿ ಮುಖಂಡ ದಿವಂಗತ ವಿನಾಯಕ್ ದಾಮೋದರ್ ಸಾವರ್ಕರ್ ಕ್ಷಮೆಯಾಚಿಸಿದ್ದರು. ಆಗ ಅಂಡಮಾನ್ ನ ಸೆಲ್ಯೂಲಾರ ಜೈಲಿನಲ್ಲಿದ್ದ ಸಾವರ್ಕರ್ ಈ ಪತ್ರ ಬರೆದಿದ್ದರು. ಸಾವರ್ಕರ್ ಅವರ ಈ ವಿಷಯವನ್ನು ಗುರಿಯಾಗಿಸಿ ರಾಹುಲ್ ಹೇಳಿಕೆ  ನೀಡಿದ್ದರು.