ತಿರುಚಿರಾಪಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡಿನಲ್ಲಿ ಓರ್ವ ಅಸಾಧಾರಣ ಅಭಿಮಾನಿ ಇದ್ದಾರೆ. ಹೌದು, ಪ್ರಧಾನಿ ಮೋದಿ ಅವರ ಕಾರ್ಯಶೈಲಿಯಿಂದ ಪ್ರಭಾವಿತರಾಗಿರುವ ರೈತರೊಬ್ಬರು ತಮ್ಮ ಕೃಷಿ ಭೂಮಿಯಲ್ಲಿ ಪ್ರಧಾನಿಗಾಗಿಯೇ ಒಂದು ದೇವಾಲಯ ನಿರ್ಮಿಸಲು ನಿರ್ಧರಿಸಿದ್ದಾರೆ.
ಈ ದೇವಸ್ಥಾನದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೂರ್ತಿಯ ಜೊತೆಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ, ಹಾಲಿ ಮುಖ್ಯಮಂತ್ರಿ ಎಡಪಾಡಿ ಪಳನಿಸ್ವಾಮಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರಗಳನ್ನೂ ಸಹ ಇರಿಸಿದ್ದಾರೆ.
>
ತಿರುಚಿರಾಪಳ್ಳಿಯಿಂದ ಸುಮಾರು 63 ಕಿ.ಮೀ ದೂರದಲ್ಲಿರುವ ಸ್ಲೀಪಿ ಎರಾಕುಡಿ ಗ್ರಾಮದಲ್ಲಿರುವ 50 ವರ್ಷ ವಯಸ್ಸಿನ ರೈತ ಪಿ. ಶಂಕರ್ ಕಳೆದ ವಾರ ತಮ್ಮ ಜಮೀನಿನಲ್ಲಿ ದೇವಾಲಯವನ್ನು ಉಧ್ಘಾಟಿಸಿದ್ದಾರೆ ಮತ್ತು ನಿತ್ಯ ಪೂಜೆ ಅರ್ಚನೆಯನ್ನೂ ಸಹ ಕೈಗೊಳ್ಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗಳಂತಹ ಯೋಜನೆಗಳಿಂದ ತಾವು ಲಾಭ ಪಡೆದಿದ್ದು, ಪ್ರಧಾನಿ ಅವರ ಕಾರ್ಯಶೈಲಿಯಿಂದ ಪ್ರಭಾವಿತರಾಗಿ ತಾವು ಈ ದೇವಸ್ಥಾನ ನಿರ್ಮಿಸಿರುವುದಾಗಿ ಶಂಕರ್ ಹೇಳಿದ್ದಾರೆ.
ಸುಮಾರು 1.2ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಈ 8x8 ಅಂಗುಲದ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ಮಿತಹಾಸ್ಯ ಬೀರುವ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಹೊರಗಡೆ ಬಿಡಿಸಲಾಗುವ ಸಾಂಪ್ರದಾಯಿಕ ಕೊಲಂ ರಂಗೋಲಿ ಇಲ್ಲಿಗೆ ಭೇಟಿ ನೀಡುವವರನ್ನು ಸ್ವಾಗತಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯ ಎರಡೂ ಪಕ್ಕಕ್ಕೆ ಸಾಂಪ್ರದಾಯಿಕ ದೀಪವನ್ನು ಸಹ ಉರಿಸಲಾಗುತ್ತಿದ್ದು, ಪ್ರಧಾನಿ ಮೋದಿ ಅವರ ಟ್ರೇಡ್ ಮಾರ್ಕ್ ಎಂದೇ ಹೇಳಲಾಗುವ ಅವರ ಕೇಶವಿನ್ಯಾಸ ಹಾಗೂ ಬಿಳಿ ಬಣ್ಣದ ಗಡ್ಡವನ್ನು ಸಹ ಈ ಮೂರ್ತಿ ಒಳಗೊಂಡಿದೆ.
ದೇವಸ್ಥಾನದ ಕುರಿತು ಮಾಹಿತಿ ನೀಡಿರುವ ಶಂಕರ್ "ನಾನು 8 ತಿಂಗಳುಗಳ ಹಿಂದೆ ಈ ದೇವಸ್ಥಾನವನ್ನು ಕಟ್ಟಿಸಲು ಆರಂಭಿಸಿದೆ. ಆದರೆ, ಹಣಕಾಸಿನ ಮುಗ್ಗಟ್ಟಿನ ಕಾರಣ ಈ ದೇವಸ್ಥಾನದ ಉದ್ಘಾಟನೆಗೆ ವಿಳಂಬವಾಗಿದ್ದು, ಕಳೆದ ವಾರವಷ್ಟೇ ತಾವು ಈ ದೇವಾಲಯವನ್ನು ಉದ್ಘಾತಿಸಿರುವುದಾಗಿ" ಹೇಳಿದ್ದಾರೆ.