ಒಡಿಶಾದಲ್ಲಿ ಭಾರೀ ಮಳೆ ಮುನ್ಸೂಚನೆ, 5 ಜಿಲ್ಲೆಗಳಲ್ಲಿ ಹೈ ಅಲರ್ಟ್

ರಾಜ್ಯದ ಮಾಲ್ಕಂಗಿರಿ, ಕೊರಪುಟ್, ನಬರಂಗ್‌ಪುರ, ಕಲಹಂಡಿ ಮತ್ತು ನುವಾಪಾಡ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವಿಶೇಷ ಪರಿಹಾರ ಆಯುಕ್ತರು (ಎಸ್‌ಆರ್‌ಸಿ) ನಿರ್ದೇಶನ ನೀಡಿದ್ದಾರೆ.

Updated: Aug 3, 2019 , 09:11 AM IST
ಒಡಿಶಾದಲ್ಲಿ ಭಾರೀ ಮಳೆ ಮುನ್ಸೂಚನೆ, 5 ಜಿಲ್ಲೆಗಳಲ್ಲಿ ಹೈ ಅಲರ್ಟ್

ನವದೆಹಲಿ: ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ಕೆಲವಡೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಒಡಿಶಾ ಸರ್ಕಾರ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಐಎಂಡಿಯ ಶುಕ್ರವಾರದ ಬುಲೆಟಿನ್ ಪ್ರಕಾರ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ರಾಜ್ಯದ ಮಾಲ್ಕಂಗಿರಿ, ಕೊರಪುಟ್, ನಬರಂಗ್‌ಪುರ, ಕಲಹಂಡಿ ಮತ್ತು ನುವಾಪಾಡ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವಿಶೇಷ ಪರಿಹಾರ ಆಯುಕ್ತರು (ಎಸ್‌ಆರ್‌ಸಿ) ನಿರ್ದೇಶನ ನೀಡಿದ್ದಾರೆ.

ಮಲ್ಕಂಗಿರಿ ಜಿಲ್ಲೆಯಲ್ಲಿ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದ್ದು, ಆಗಸ್ಟ್ 3 ರಿಂದ 5ರವರೆಗೆ ಶಾಲೆಗಳು ಮುಚ್ಚಲ್ಪಟ್ಟಿರುತ್ತವೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆಹಾರ, ನೀರು, ನೈರ್ಮಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳು ಮತ್ತು ಪರಿಹಾರ ಶಿಬಿರಗಳಿಗೆ ಪೂರ್ವ ಸಿದ್ಧತೆ ಮಾಡುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಸಿದ್ಧರಾಗಿರುವಂತೆ ಅಗ್ನಿಶಾಮಕ ಸೇವೆಗಳ ತಂಡಗಳಿಗೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೆ, ಮಿನುಗಾರ್ರೈಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. 

ಇದಕ್ಕೂ ಮುನ್ನ ಜೂನ್ 29 ರಂದು ಭಾರಿ ಮಳೆಯ ಹಿನ್ನೆಲೆಯಲ್ಲಿ ರಾಜ್ಯದ ಮಲ್ಕಂಗಿರಿ, ನಬರಂಗ್‌ಪುರ, ನುವಾಪಾಡಾ, ಕೊರಪುತ್, ಕಲಹಂಡಿ, ಸೋನೆಪುರ, ಬೋಲಂಗೀರ್ ಮತ್ತು ಕಂಧಮಾಲ್ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು.