ನವದೆಹಲಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ವಿಧಿಸಲಾದ ನಿಷೇದಾಜ್ಞೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮುಂದೊಂದು ದಿನ ಮಹಾರಾಷ್ಟ್ರವನ್ನು ಇದೇ ಮಾದರಿಯಲ್ಲಿ ವಿಂಗಡಿಸಬಹುದು ಎಂದು ಹೇಳಿದರು.
ಮುಂಬೈನಲ್ಲಿ ಶುಕ್ರವಾರದಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, "ಕಾಶ್ಮೀರದಲ್ಲಿ ಸೈನ್ಯ ಮತ್ತು ಪೊಲೀಸ್ ಸಿಬ್ಬಂದಿಯನ್ನು ಜನರ ಮನೆಗಳ ಎದುರು ನಿಯೋಜಿಸಲಾಗಿದೆ. ಇಂಟರ್ನೆಟ್, ಸೆಲ್ ಫೋನ್, ಟೆಲಿವಿಷನ್ ಸೇವೆಗಳು ಸ್ಥಗಿತಗೊಂಡಿವೆ ಆಗಿವೆ...ಅಲ್ಲಿ ಎಲ್ಲವನ್ನೂ ಮುಚ್ಚಲಾಗಿದೆ. ಇಂದು ಕಾಶ್ಮೀರವಾಗಿರಬಹುದು, ನಾಳೆ ಅದು ವಿದರ್ಭ ಇರಬಹುದು, ಮುಂದೊಂದು ದಿನ ಮುಂಬೈ ಕೂಡ ಆಗಬಹುದು' ಎಂದು ಅಭಿಪ್ರಾಯಪಟ್ಟರು.
"ನಾಳೆ, ಸ್ಟೆನ್ ಗನ್ ಹೊಂದಿರುವವರು ನಿಮ್ಮ ಮನೆಗಳ ಹೊರಗೆ ನಿಲ್ಲಬಹುದು. ಇಂಟರ್ನೆಟ್, ಮಹಾರಾಷ್ಟ್ರದ ಸೆಲ್ ಫೋನ್ ಸೇವೆಗಳು ಸಹ ಸ್ಥಗಿತಗೊಳ್ಳುತ್ತವೆ ... ಮತ್ತು ನಿಮ್ಮ ಬಗ್ಗೆ ಯೋಚಿಸದೆ ಬಲವಂತವಾಗಿ ಮಹಾರಾಷ್ಟ್ರವು ವಿಭಜನೆಯಾಗುತ್ತದೆ" ಎಂದು ಅವರು ಹೇಳಿದರು. ಇದಕ್ಕೆ ಪ್ರಮುಖ ಕಾರಣ ಇಂದು ಬಿಜೆಪಿ ಹೊಂದಿರುವ ಬಹುಮತ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರ ಉದ್ಯೋಗ ಸೃಷ್ಟಿ ಕುರಿತ ಹೇಳಿಕೆಗೆ ಪ್ರಶ್ನಿಸಿದ ಠಾಕ್ರೆ ಬಿಜೆಪಿ ಆಳ್ವಿಕೆ ಹೊಂದಿರುವ ರಾಜ್ಯದಲ್ಲಿ 370 ನೇ ವಿಧಿ ಜಾರಿಯಲ್ಲಿ ಇದ್ದಿರಲಿಲ್ಲ, ಆದರೂ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಿಲ್ಲವೇಕೆ ? ಎಂದು ಪ್ರಶ್ನಿಸಿದರು.
370 ನೇ ವಿಧಿಯ ವಿಶೇಷ ನಿಬಂಧನೆಗಳನ್ನು ರದ್ದುಪಡಿಸುವುದನ್ನು ಸ್ವಾಗತಿಸಿದ ಕೆಲವೇ ದಿನಗಳ ನಂತರ ಠಾಕ್ರೆ ಅವರ ಈ ಹೇಳಿಕೆ ಬಂದಿದೆ.