ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಇಂದು ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎನ್ನಲಾಗಿದೆ.
ಮಂಗಳವಾರ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಕೆಸಿಆರ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ 88 ಸ್ಥಾನಗಳನ್ನು ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಕಾಂಗ್ರೆಸ್ 19 ಸ್ಥಾನಗಳನ್ನು ಪಡೆದು ಎರಡನೇ ದೊಡ್ಡ ಪಕ್ಷ ಎನಿಸಿಕೊಂಡಿತು. ಉಳಿದಂತೆ ಬಿಜೆಪಿ 1, ಟಿಡಿಪಿ 2 ಮತ್ತು ಇತರೆ 2 ಸ್ಥಾನಗಳನ್ನು ಪಡೆದವು.
ಈ ಹಿನ್ನೆಲೆಯಲ್ಲಿ ಟಿಆರ್ ಎಸ್ ಪಕ್ಷದ ಕೆ.ಚಂದ್ರಶೇಖರ್ ರಾವ್ ಅವರು ಇಂದು ಅಧಿಕೃತವಾಗಿ ಶಾಸಕಾಂಗದ ಪಕ್ಷದ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ 11:30ಕ್ಕೆ ಶಾಸಕಾಂಗ ಪಕ್ಷದ ಸಭೆ ಆರಂಭವಾಗಲಿದ್ದು, ಈ ಪ್ರಕ್ರಿಯೆ ನಡೆಯಲಿದೆ.
ಬಳಿಕ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ, ತಮ್ಮ ನೇತೃತ್ವದಲ್ಲಿ ಎರಡನೇ ಬಾರಿ ಸರ್ಕಾರ ರಚನೆಗೆ ಕೆಸಿಆರ್ ಹಕ್ಕು ಮಂಡಿಸಲಿದ್ದಾರೆ. ಹಾಗೆಯೇ ನಾಳೆಯೇ ಪ್ರಮಾನವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
Sources: TRS President K Chandrashekhar Rao will take oath as the Chief Minister of Telangana tomorrow. Telangana Rashtra Samithi (TRS) won 88 seats in #TelanganaAssemblyElections2018. pic.twitter.com/WAu536ZQr0
— ANI (@ANI) December 12, 2018