ಕಾಸ್ ಗಂಜ್ : ಉತ್ತರಪ್ರದೇಶದ ಕಾಸ್ ಗಂಜ್ ನಲ್ಲಿ ನಡೆದ ಕೋಮು ಗಲಭೆಯಲ್ಲಿ ಚಂದನ್ ಗುಪ್ತಾ(22) ಎಂಬ ಯುವಕನ ಸಾವಿಗೆ ಕಾರಣವಾದ ಮುಖ್ಯ ಆರೋಪಿ ಸಲೀಂ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಸ್ಗಾಂಜ್ನಲ್ಲಿನ ಕೋಮು ಘರ್ಷಣೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಆರೋಪಿಯನ್ನು ಇಂದು ಬಂಧಿಸಲಾಗಿದೆ.
ಕಾಸ್ ಗಂಜ್ ಹಿಂಸಾಚಾರಕ್ಕೆ ಯಾರು ಹೊಣೆಗಾರರೆಂಬ ಕುರಿತು ಆರೋಪ ಪತ್ಯಾರೋಪಗಳು ರಾಜ್ಯದಲ್ಲಿ ಕೇಳಿಬರುತ್ತಿದೆ. ಈ ಸಂಬಂಧ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ RSS ಸಂಯೋಜನೆ ಹೊಂದಿರುವ ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಬುಧವಾರ 'ತಿರಂಗ ಯಾತ್ರೆ' ನಡೆಸಿತು. ಆದರೆ ಯಾತ್ರೆ ನಡೆಸಲು ಪರಿಷತ್ ಆಗ್ರಾ ಜಿಲ್ಲಾ ಆಡಳಿತದ ಅನುಮತಿ ಪಡೆದಿರಲಿಲ್ಲ ಎಂಬುದು ತಿಳಿದುಬಂದಿದೆ.
ಈ ಹಿಂದೆ ವಿಹೆಚ್ಪಿ ಉಪಾಧ್ಯಕ್ಷ (ಬ್ರಜ್ ಪ್ರಂತ್) ಸುನಿಲ್ ಪರಾಶರ್ ತಮ್ಮ ತಂಡದೊಂದಿಗೆ ಮುಂದಿನ ದಿನಗಳಲ್ಲಿ ಹೆಚ್ಚು ತಿರಂಗ ಯಾತ್ರೆಗಳನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದರು. ಅದರಂತೆ ಆಗ್ರಾ, ಅಲಿಗಢ ಮತ್ತು ಬರೇಲಿ ವಿಭಾಗಗಳಲ್ಲಿ 20 ಜಿಲ್ಲೆಗಳಲ್ಲಿ, ಬ್ರಾಜ್ ಪ್ರದೇಶದಲ್ಲಿ ಇನ್ನಷ್ಟು 'ತಿರಂಗ ಯಾತ್ರೆ' ನಡೆಯಲಿದೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ವಿವೇಕ್ ಬನ್ಸಾಲ್ ನೇತೃತ್ವದ ಕಾಂಗ್ರೆಸ್ನ ನಿಯೋಗವು ಕಾಸ್ಗಂಜ್ಗೆ ಹೋಗುವುದನ್ನು ರದ್ದುಪಡಿಸಿತು. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಉಲ್ಲೇಖಿಸಿ ಕಾಸ್ ಗಂಜ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಆರ್.ಕೆ. ಸಿಂಗ್ ಅವರು ನಿಯೋಗಕ್ಕೆ ಅನುಮತಿ ನಿರಾಕರಿಸಿದರು.
ಗಣರಾಜ್ಯೋತ್ಸವ ದಿನದಂದು ತಿರಂಗಾ ಯಾತ್ರೆ ನಡೆಯುತ್ತಿದ್ದ ವೇಳೆ ಚಂದನ್ ಗುಪ್ತಾನನ್ನು ತಡೆದು ರಾಷ್ಟ್ರಧ್ವಜವನ್ನು ಕಿತ್ತೆಸೆದಿದ್ದರು. ಬಳಿಕ ಗನ್ ಪಾಯಿಂಟ್ ಬೆದರಿಕೆಯಲ್ಲಿ ಪಾಕ್ ಪರ ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು. ಆದರೆ ತನ್ನ ಮಗ ಘೋಷಣೆ ಕೂಗಲು ನಿರಾಕರಿಸಿದಾಗ ತಲೆಗೆ ಗುಂಡಿಟ್ಟು ಕೊಂದಿರುವುದಾಗಿ ಗುಪ್ತಾ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.