ನವದೆಹಲಿ: ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ರಾಜಕಾರಣಿಗಳು ಆರೋಪ ಸಾಬೀತಾಗುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಅವರನ್ನು ಯಾವುದೇ ಕಾರಣಕ್ಕೂ ಅನರ್ಹಗೊಳಿಸುವಂತಿಲ್ಲ ಎಂದು ಮಂಗಳವಾರ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಅಲ್ಲದೆ, ಆರೋಪ ಹೊತ್ತ ರಾಜಕಾರಣಿಗಳ ಸ್ಪರ್ಧೆ ಕುರಿತಂತೆ ಸಂಸತ್ ನಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ಕುರಿತು ಕಾನೂನು ರೂಪಿಸಬೇಕು. ಇನ್ನು ಜನರೇ ರಾಜಕಾರಣಿಗಳ ಹಣೆಬರಹ ನಿರ್ಧರಿಸಬೇಕು. ಕಳಂಕ ರಹಿತ ಅಭ್ಯರ್ಥಿಗಳನ್ನು ಚುನಾಯಿಸುವ ಅಧಿಕಾರ ಮತದಾರರಿಗಿರುವುದರಿಂದ ಅವರೇ ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಸುಪ್ರಿಂ ಕೋರ್ಟ್ ಹೇಳಿದೆ.
ಕ್ರಿಮಿನಲ್ ಪ್ರಕರಣಗಳ ಆರೋಪ ಹೊತ್ತ ರಾಜಕಾರಣಿಗಳು ಶಾಸಕರಾಗಿ, ಸಂಸದರಾಗಿ ಮುಂದುವರಿಯಲು ಅವಕಾಶ ಕೊಡಬಾರದೆಂದು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ.