Kannada film director Guruprasad: ಕನ್ನಡ ಚಲನಚಿತ್ರ ಕ್ಷೇತ್ರದ ಪ್ರತಿಭಾವಂತ ಬರಹಗಾರ, ನಟ, ನಿರ್ದೇಶಕ ಗುರುಪ್ರಸಾದರವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ನವೆಂಬರ್ 3ರಂದು ಸುದ್ದಿಯಾಗಿ ಅನೇಕರಿಗೆ ಆಘಾತವನ್ನುಂಟು ಮಾಡಿತು. ಆಘಾತ ಯಾಕೆಂದರೆ ಅಗಾಧವಾದ ಮಹತ್ವಾಂಕಾಂಕ್ಷೆ ಇಟ್ಟುಕೊಂಡಿರುವ ವ್ಯಕ್ತಿ ಹೀಗೆ ಸಾಲ, ಸೋಲು ಹಾಗೂ ವ್ಯಸನಗಳಿಗೆ ಸಿಲುಕಿ ಎಲ್ಲರಿಂದ ದೂರವಾಗಿ ಸಾವನ್ನು ಆಹ್ವಾನಿಸಿಕೊಂಡಿದ್ದು ನಂಬಲಾಗದ ಸತ್ಯ.
ಇದನ್ನೂ ಓದಿ: Viral Video: ರಂಗೋಲಿ ಹಾಕುತ್ತಿದ್ದ ಯುವತಿಯರ ಮೇಲೆ ಕಾರು ಚಲಾಯಿಸಿದ ಅಪ್ರಾಪ್ತ, ವಿಡಿಯೋ ವೈರಲ್..!
ಗುರುಪ್ರಸಾದರ ಸಾವಿನಿಂದ ಕಲಿಯಬೇಕಾದ ಪಾಠಗಳೇನೆಂದರೆ...
* ಪ್ರತಿಭೆ ಎನ್ನುವುದು ವಿನಯವನ್ನು ಕಲಿಸಬೇಕೇ ಹೊರತು ಅಹಮಿಕೆಯನ್ನು ಹೆಚ್ಚಿಸಬಾರದು.
* ಯಶಸ್ಸು ಬಂದಾಗ ಮೆರೆದು, ಸೋಲಾದಾಗ ಉರಿದು ಬೂದಿಯಾಗಬಾರದು.
* ಶ್ರೇಷ್ಠತೆಯ ವ್ಯಸನ ಪೀಡಿತರಾಗಿ ಯಶಸ್ಸಿನ ಹಾದಿಯಲಿ ಹೆಗಲು ಕೊಟ್ಟವರೊಂದಿಗೆ ಮನಸ್ಥಾಪ ಮಾಡಿಕೊಳ್ಳಬಾರದು.
* ತನ್ನದಲ್ಲದ ವಿಷಯಗಳಿಗೆಲ್ಲಾ ಅನಗತ್ಯವಾಗಿ ವಾದಿಸುವುದು, ವಿಕ್ಷಿಪ್ತವಾಗಿ ಪ್ರತಿಕ್ರಿಯಿಸುವುದು, ವಿಚಿತ್ರವಾಗಿ ವರ್ತಿಸುವುದು ಹಾಗೂ ತನಗಾಗದವರ ನಿಂದಿಸುವುದನ್ನು ಮಾಡಬಾರದು.
* ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನ ಮೆಟ್ಟಿಲು ಹತ್ತಲು ಯತ್ನಿಸಬೇಕೇ ಹೊರತು ಮರಣದ ಮನೆಯ ಬಾಗಿಲು ತಟ್ಟಬಾರದು.
* ಕಂಡ ಕನಸುಗಳನ್ನು ನನಸಾಗಿಸಲು ತಮ್ಮ ಸಾಮರ್ಥ್ಯದ ಮಿತಿಯಲ್ಲೇ ಪ್ರಯತ್ನಿಸಬೇಕೇ ಹೊರತು ಅಳತೆ ಮೀರಿ ಸಾಲ ಮಾಡಿ ಪಗಡೆ ಆಡಬಾರದು, ಸಿನಿಮಾ ಮಾಡಬಾರದು.
* ಮಾಡಿದ ಸಾಲದ ಶೂಲ ನೆತ್ತಿಯ ಮೇಲೆ ಕುತ್ತಾದಾಗ ಪರ್ಯಾಯ ಮಾರ್ಗಗಳನ್ನು ಹುಡುಕಬೇಕೇ ಹೊರತು ಹತಾಶೆಯಿಂದ ನೇಣಿನ ಕುಣಿಕೆಗೆ ಕೊರಳು ಕೊಡಬಾರದು.
* ಸಾಧನೆಗೆ ಪ್ರತಿಭೆಯೊಂದೇ ಸಾಲದು, ಆರೋಗ್ಯವನ್ನೂ ಚೆನ್ನಾಗಿಟ್ಟುಕೊಳ್ಳಬೇಕು. ಜೀವನ ಪರ್ಯಂತ ಜೊತೆಯಾಗುವ ಖಾಯಿಲೆ ಇದ್ದಾಗ ನಿರ್ಲಕ್ಷಿಸದೇ ಚಿಕಿತ್ಸೆ ಪಡೆಯುವುದು ಮೊದಲ ಆದ್ಯತೆಯಾಗಬೇಕು.
* ಸೋಲಿನ ನೋವು ಹಾಗೂ ಸಾಲದ ಸಂಕಟಗಳು ಬಾಧಿಸುವಾಗ ಕುಡಿತದ ದಾಸ್ಯ ಎಂದೂ ಪರಿಹಾರವಾಗದು. ಕುಡಿತದ ವ್ಯಸನ ಮಿತಿಮೀರಿ ಅತಿಯಾದರೆ ಅವಸಾನ ಖಂಡಿತ ಎನ್ನುವುದನ್ನು ಮರೆಯಬಾರದು.
* ತಕಾರಾರುಗಳಿಲ್ಲದ ದಾಂಪತ್ಯವೇ ಇಲ್ಲ. ಹೊಂದಾಣಿಕೆ ಮರೆತು ಗಂಡಾಳ್ವಿಕೆಯ ದಮನಕ್ಕಿಳಿದರೆ ಕಟ್ಟಿಕೊಂಡವಳೂ ಬಿಟ್ಟು ದೂರಾಗದೇ ಇರಲಾರಳು. ಕಡು ಕೋಪದಲಿ ಕೊನೆಮಾಡಿಕೊಂಡ ಸಂಬಂಧ ಮತ್ತೆ ಕೂಡದು.
* ಹುಚ್ಚುತನ ಗೊತ್ತಿದ್ದೂ ಮೆಚ್ಚಿ ಬಂದು ಜೊತೆಯಾದವಳ ಬಾಳಿಸಲಾಗದೇ ಹೊಟ್ಟೆಯಲಿ ಬೀಜ ಬಿತ್ತಿ ದೂರ ತಳ್ಳುವುದು ಪುರುಷಕುಲಕ್ಕೆ ಅವಮಾನ. ಅಲ್ಲಿಂದ ಒಂಟಿತನದ ಜೀವನ ಆರಂಭವಾಗುತ್ತದೆ.
* ಬಿದ್ದಾಗ ಮೇಲೆತ್ತಲು, ನೊಂದಾಗ ಸಾಂತ್ವನ ಹೇಳಲು ಜೊತೆಗೊಂದು ಜೀವ ಇದ್ದರೆ ಒಂಟಿತನ ಕಾಡದು, ಸಾಯುವ ಯೋಚನೆಯೂ ಬಾರದು.
* ನಿಶ್ಚಿತ ಆದಾಯದ ಖಾತ್ರಿಇಲ್ಲದ ಸಿನಿಮಾ ಕ್ಷೇತ್ರವನ್ನು ಮಾತ್ರ ನಂಬಿ ಬದುಕು ಕಟ್ಟಿಕೊಳ್ಳುವ ಹಠ ಬಿಟ್ಟು ಪರ್ಯಾಯ ಆದಾಯದತ್ತ ಇರಬೇಕು ಗಮನ. ಪಯಣ ಪ್ರಯಾಸಕರವಾದಾಗ ಬದಲಿಸಬೇಕು ದಾರಿ, ಮುಟ್ಟಬೇಕೆಂದರೆ ಇಟ್ಟ ಗುರಿ.
* ತಾಳಲಾಗದ ವೇದನೆ ನೀಗಲು ಸಾವೊಂದೇ ಪರಿಹಾರವಲ್ಲ. ತಾಳ್ಮೆ ಇದ್ದರೆ ಮರಣವನ್ನೂ ಮೀರಿ ಬಾಳಬಹುದು, ಸಹನೆ ಇದ್ದರೆ ಇಂದಲ್ಲಾ ನಾಳೆ ಕತ್ತಲು ಕರಗಿ ಬೆಳಕು ಮೂಡದೇ ಇರದು.
* ಸಾವಿಗೂ ಒಂದು ಘನತೆ ಇದೆ ಅದಾಗಲೇ ಬಂದಾಗ. ಪಲಾಯಣವಾದದ ಕಳಂಕ ನಾವಾಗಲೇ ಮರಣ ತಂದುಕೊಂಡಾಗ.
* ನಾಲಿಗೆಗೂ ಹಾಗೂ ಮೆದುಳಿಗೂ ನಡುವೆ ಫಿಲ್ಟರ್ ಇರಬೇಕು. ಅಂದುಕೊಂಡಿದ್ದೆಲ್ಲಾ ಕಾರಿಕೊಳ್ಳಲು ಮುಂದಾದರೆ ಸಂಬಂಧಗಳು ನಂದಿ ಹೋಗುತ್ತವೆ.
* "ತಪ್ಪು ಮಾಡದವ್ರು ಯಾರವ್ರೆ, ಅಪ್ಪಿ ತಪ್ಪಿ ತಪ್ಪಾದರೆ ತಿದ್ಕೊಳ್ಳೋಕೆ ದಾರಿ ಐತೆ" ಎಂಬುದನ್ನು ಅರಿತರೆ ಜೀವನ. ತಪ್ಪುಗಳೇ ಬದುಕಾದರೆ ಅಂತ್ಯವೂ ದಾರುಣ.
ಇದನ್ನೂ ಓದಿ: ಮತ್ತೊಂದು ಜನ್ಮ ಎತ್ತಿ ಬಂದರೂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ: ಡಿಕೆಶಿ
ಹೀಗೆ.. ಗುರುಪ್ರಸಾದರ ಅಕಾಲಿಕ ಸಾವು ಹತ್ತು ಹಲವು ಎಚ್ಚರಿಕೆಯ ಪಾಠವನ್ನು ಕಲಿಸುವಂತಿದೆ. ಸನ್ನಿವೇಶಗಳು ಸೃಷ್ಟಿಸುವ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸದೇ ಇದ್ದಾಗ ಹತಾಶೆ ಅತಿಯಾಗಿ ದುರಂತಗಳು ಸಂಭವಿಸುತ್ತವೆ. ಗುರುಪ್ರಸಾದರ ಬದುಕು ಮತ್ತು ಸಾವನ್ನು ವಿಶ್ಲೇಷಿಸಿದಾಗ ಕಲಿಯಲು ಅನೇಕ ಪಾಠಗಳು ಸಿಕ್ಕುತ್ತವೆ. ಯಶಸ್ಸಿಗಿಂತ ಮುಂಚೆ, ಯಶಸ್ಸಿನ ನಂತರದ ಬದಲಾವಣೆಗಳು ಹಾಗೂ ಸೋಲಿನಿಂದಾದ ಪರಿಣಾಮಗಳು ಹೇಗೆ ಸೃಜನಶೀಲ ವ್ಯಕ್ತಿಯನ್ನು ಅನೇಕ ಸ್ಥಿತ್ಯಂತರಗಳಿಗೆ ದೂಡುತ್ತವೆ ಮತ್ತು ದುರಂತದತ್ತ ಕರೆದೊಯ್ಯುತ್ತವೆ ಎಂಬುದಕ್ಕೆ ಗುರುಪ್ರಸಾದರು ಮಾದರಿಯಾಗಿದ್ದಾರೆ. ತಪ್ಪು ತಿದ್ದಿಕೊಳ್ಳಲು ದಾರಿ ಐತೆ ಎಂದು ತಮ್ಮ 'ಮಠ' ಸಿನೆಮಾದಲ್ಲಿ ಹೇಳಿದ್ದರ ವಿರುದ್ಧವಾಗಿ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನವನ್ನೂ ಮಾಡದ ನಿರ್ದೇಶಕ ಗುರುರವರು ಸಾವಿಗೆ ಶರಣಾಗಿದ್ದು ವಿಪರ್ಯಾಸ.
ಗುರುಪ್ರಸಾದರ ಸಾವನ್ನು ಸ್ವಯಂಕೃತ ಅಪರಾಧವೆಂದೋ, ವ್ಯಸನ ಪೀಡಿತನೊಬ್ಬನ ಅಂತ್ಯವೆಂದೋ ತಿಳಿದು ಉಪೇಕ್ಷೆ ಮಾಡುವುದು ಸೂಕ್ತವಲ್ಲ. ಎಂತಹ ವ್ಯಕ್ತಿ ಹೇಗಾದ? ಯಶಸ್ಸಿನ ಅಮಲು, ಸೋಲಿನ ಹತಾಶೆಗಳು ಕ್ರಿಯಾಶೀಲ ವ್ಯಕ್ತಿಯನ್ನು ಹೇಗೆ ನಿಷ್ಕ್ರಿಯವಾಗಿಸುತ್ತವೆ ಎಂಬುದನ್ನು ಯೋಚಿಸಬೇಕಿದೆ. ಗುರುಪ್ರಸಾದರ ಸಾವು ಕೂಡ ವ್ಯರ್ಥವಾಗದೇ ಬದುಕಿದ್ದವರಿಗೆ ಅನೇಕ ಮಾರ್ಗಸೂಚಿಗಳನ್ನು ಕೊಡುವಂತಿದೆ. ಸಂಕಟಗಳಿಂದ ಬಿಡುಗಡೆ ಪಡೆಯಲು ಮರಣವೊಂದೇ ಮಾರ್ಗವಲ್ಲಾ ಎಂಬುದನ್ನು ಅರಿಯಬೇಕಿದೆ.
ಶಶಿಕಾಂತ ಯಡಹಳ್ಳಿ, ಅಂಕಣಕಾರರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ