ಅಂಜಾರ್ : "ನನ್ನ ಮನೆಯ ಅಡುಗೆ ಕೋಣೆ ಗುಜರಾತಿ ಖಾದ್ಯಗಳಿಂದ ತುಂಬಿ ಹೋಗಿದ್ದು, ಸ್ವಾದಿಷ್ಟ ಗುಜರಾತಿ ಖಾದ್ಯಗಳ ಮೇಲಿನ ಪ್ರೀತಿಯಿಂದಾಗಿ ನನ್ನ ದೇಹದ ತೂಕ ಹೆಚ್ಚಾಗುತ್ತಿದೆ'' ಎಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಗುಜರಾತ್ ಚುನಾವಣಾ ಪ್ರಚಾರಕ್ಕೆ ವೈಯಕ್ತಿಕ ಸ್ಪರ್ಶ ನೀಡಿದ್ದಾರೆ.
''ನಿನ್ನೆ, ನನ್ನ ತಂಗಿ ನನ್ನ ಮನೆಗೆ ಬಂದಿದ್ದಳು. ಆಗ ನನ್ನ ಅಡುಗೆಮನೆಯಲ್ಲಿದ್ದ ಗುಜರಾತಿ ಖಾದ್ಯಗಳಾದ - ಖಕ್ರಾ ಗುಜರಾತಿ, ಅಚಾರ್ ಗುಜರಾತಿ, ಮೊಂಗ್ಫಾಲಿ ಗುಜರಾತಿ ಮೊದಲಾದವನ್ನು ಗಮನಿಸಿದಳು. ನಿಮ್ಮ ಗುಜರಾತಿ ಆಹಾರ ನನ್ನನ್ನು ಸಂಪೂರ್ಣವಾಗಿ ಆವರಿಸಿದೆ. ಇದರಿಂದ ನನ್ನ ದೇಹ ತೂಕ ಜಾಸ್ತಿಯಾಗಿದೆ'' ಎಂದು ರಾಹುಲ್ ಜನಸಮೂಹವನ್ನು ಉದ್ದೇಶಿಸಿ ಹೇಳಿದರು.
ಈ ಮಧ್ಯೆ ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸಿದ ರಾಹುಲ್, ಪ್ರಧಾನಿ ಮೋದಿ ಅವರು ಗುಜರಾತ್ ಅಭಿವೃದ್ಧಿ ಬಗ್ಗೆ ಗಮನ ಕೇಂದ್ರೀಕರಿಸುವ ಬದಲು, ಕಾಂಗ್ರೆಸ್ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ'' ಎಂದು ಟೀಕಿಸಿದರು.
"ನಿನ್ನೆಯಷ್ಟೇ ನಾನು ಮೋದೀ ಜೀ ಅವರು ಭಾಷಣ ಕೇಳಿದೆ. ಅವರ ಭಾಷಣದ ಶೇ.60ರಷ್ಟು ಭಾಗ ನನ್ನ ಮತ್ತು ಕಾಂಗ್ರೆಸ್ ಬಗ್ಗೆಯೇ ಇತ್ತು. ಈ ಚುನಾವಣೆ ನಿಜಕ್ಕೂ ಕಾಂಗ್ರೆಸ್ ಅಥವಾ ಬಿಜೆಪಿಗೆ ಸಂಬಂಧಿಸಿದ್ದಲ್ಲ; ಬದಲಾಗಿ ಗುಜರಾತ್ ಮತ್ತು ಅದರ ಜನರ ಭವಿಷ್ಯಕ್ಕೆ ಸಂಬಂಧಿಸಿದೆ' ಎಂದು ರಾಹುಲ್ ಹೇಳಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ೭ನೇ ಬಾರಿಗೆ ರಾಹುಲ್ ಗುಜರಾತ್ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯ ಸೇರಿದಂತೆ ಹಲವು ದೇಗುಲಗಳನ್ನು ಸಂದರ್ಶಿಸಿದ್ದಾರೆ.