ನವದೆಹಲಿ : NCERT ಪಠ್ಯಪುಸ್ತಕಗಳ ಪಠ್ಯಕ್ರಮ ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಬದಲಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಪತ್ರಿಕಾಗೊಷ್ಟಿಯನ್ನುದ್ದೇಶಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಜಾವಡೇಕರ್, ಸಚಿವಾಲಯವು ನಡೆಸಿದ ಆರು ಕಾರ್ಯಾಗಾರಗಳಲ್ಲಿ ಮತ್ತು ರಾಜ್ಯ ಶಿಕ್ಷಣ ಅಧಿಕಾರಿಗಳ ಸಭೆಗಳಲ್ಲಿ ದೇಶದಲ್ಲಿ ಗುಣಮಟ್ಟದ ಶಿಕ್ಷಣವನ್ನು ಹೊಂದಬೇಕೆಂಬ ಕಲ್ಪನೆಯೇ ಪ್ರಮುಖವಾಗಿತ್ತು ಎಂದು ಹೇಳಿದರು.
"ಹೆಚ್ಚಿನ ಸಂಖ್ಯೆಯ ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಣ ತಜ್ಞರು, ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಹಲವು ಶಿಕ್ಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು" ಎಂದು ಅವರು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, "ವಿದ್ಯಾರ್ಥಿಗಳು ಡೇಟಾ ಬ್ಯಾಂಕುಗಳಲ್ಲ, ಶಿಕ್ಷಣದ ಮುಖ್ಯ ಉದ್ದೇಶವೆಂದರೆ ಉತ್ತಮ ನಾಗರಿಕನನ್ನಾಗಿ ಮಾಡುವುದು. ಇದು ನಮ್ಮ ದೈನಂದಿನ ಜೀವನದಲ್ಲಿ ಮೌಲ್ಯ ಶಿಕ್ಷಣ, ಜೀವನ ಕೌಶಲ್ಯ, ಅನುಭವದ ಕಲಿಕೆ ಮತ್ತು ದೈಹಿಕ ಸಾಮರ್ಥ್ಯಗಳನ್ನು ಹುಟ್ಟುಹಾಕುವ ಸಮಯದ ಅಗತ್ಯವನ್ನು ಒಳಗೊಂಡಿದೆ" ಎಂದರು.
NCERT ಪಠ್ಯಕ್ರಮವನ್ನು ಬದಲಿಸುವ ಪರಿಕಲ್ಪನೆಯು ವಿದ್ಯಾರ್ಥಿಗಳ ಮೇಲೆ ಹೊರೆ ತಗ್ಗಿಸುವುದು ಮತ್ತು ವಿವಿಧ ವಿಷಯಗಳ ಮೂಲಭೂತ ತತ್ವಗಳನ್ನು ಕಲಿಸುವುದಾಗಿದೆ ಎಂದು ಅವರು ಹೇಳಿದರು.
NCERT ಪಠ್ಯಕ್ರಮವನ್ನು ಕಡಿಮೆ ಮಾಡುವ ಕುರಿತು ಶಿಕ್ಷಕರು, ಪೋಷಕರು, ಶೈಕ್ಷಣಿಕ ತಜ್ಞರು, ವಿದ್ಯಾರ್ಥಿಗಳು ಮತ್ತು ಪಾಲುದಾರರ ಸಲಹೆಗಳಿಗಾಗಿ ಸಚಿವಾಲಯದ ವೆಬ್ ಸೈಟ್ನಲ್ಲಿ ಮನವಿ ಪ್ರಕಟಿಸಲಾಗುವುದು. ಎರಡು ತಿಂಗಳ ತರುವಾಯ ಅವರ ಸಲಹೆಗಳನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.