ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು 2019 ರ ಲೋಕಸಭೆ ಚುನಾವಣೆಗೆ ಇಂದು (ಏಪ್ರಿಲ್ 26) ವಾರಣಾಸಿಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮೊದಲು ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಗುಜರಾತ್ ನಲ್ಲಿ ತಾವು ಮುಖ್ಯಮಂತ್ರಿಯಾದಾಗಲೂ ಕೂಡ ಪೂರೈಸಲಾಗದ ತಮ್ಮ ಆಶಯವನ್ನು ಪ್ರಸ್ತಾಪಿಸಿದ ಅವರು, ವಾರಣಾಸಿಯ ಜನತೆ ಅದನ್ನು ಪೂರೈಸುವಿರಾ ಎಂದು ಪ್ರಶ್ನಿಸಿದ್ದಾರೆ.
ಕ್ಷೇತ್ರದ ಬೂತ್ ಮಟ್ಟದ ಕಾರ್ಯಕತ್ರರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ನಾನು ಪ್ರಜಾಪ್ರಭುತ್ವವನ್ನು ಗೆಲ್ಲಲು ಬಯಸುತ್ತೇನೆ. ಈ ಚುನಾವಣೆಯಲ್ಲಿ ನಾವು ಕೆಲವು ದಾಖಲೆಗಳನ್ನು ಮುರಿಯಬೇಕು. ಬನಾರಸ್ ನಲ್ಲಿ ಉತ್ತರಪ್ರದೇಶದಲ್ಲಿ ಇದುವರೆಗೂ ಆಗಿರುವ ಚುನಾವಣೆಯಲ್ಲಿ ಪ್ರತಿ ಬೂತ್ ನಲ್ಲಿ ಎಷ್ಟು ಮತದಾನವಾಗಿದೆಯೋ ಅದಕ್ಕಿಂತ ಹೆಚ್ಚು ಮತದಾನದೊಂದಿಗೆ ದಾಖಲೆ ಮಾಡಿ ಜಗತ್ತಿಗೆ ತೋರಿಸಬೇಕು" ಎಂದು ಕರೆ ನೀಡಿದರು.
ಬಳಿಕ, ನಾನು ಗುಜರಾತ್ ನಲ್ಲಿ ಪೂರ್ಣಗೊಳ್ಳದ ನನ್ನ ಅಪೇಕ್ಷೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ತಿಳಿಸಿದ ಮೋದಿ, ಪುರುಷರಿಗಿಂತ 5% ಹೆಚ್ಚು ಮಹಿಳೆಯರು ಮತದಾನ ಮಾಡಬೇಕೆಂದು ನಾನು ಬಯಸುತ್ತೇನೆ. ಅದನ್ನು ಬನಾರಸ್ ಪೂರೈಸಬಹುದೇ? ಎಂದು ಪ್ರಶ್ನಿಸಿದರು.