ಚುನಾವಣೆ ಬಂದ್ರೆ ಸಾಕು ರಾಹುಲ್ ಗಾಂಧಿ ಶಿವ ಭಕ್ತ ಆಗ್ತಾರೆ: ಸ್ಮೃತಿ ಇರಾನಿ

ಚುನಾವಣೆಗಾಗಿ ರಾಹುಲ್ ಗಾಂಧಿ ಅವರು ರಾಮ ನಾಮ ಜಪಿಸುವುದಷ್ಟೇ ಅಲ್ಲ, ಜತೆಗೆ ಶಿವ ಭಕ್ತರೂ ಆಗಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.

Updated: Dec 5, 2018 , 01:30 PM IST
ಚುನಾವಣೆ ಬಂದ್ರೆ ಸಾಕು ರಾಹುಲ್ ಗಾಂಧಿ ಶಿವ ಭಕ್ತ ಆಗ್ತಾರೆ: ಸ್ಮೃತಿ ಇರಾನಿ

ಹೈದರಾಬಾದ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆಗಾಗಿ ಮಾತ್ರ ರಾಮ ನಾಮ ಜಪಿಸಿ, ಶಿವಭಕ್ತನೂ ಆಗುತ್ತಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. 

ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ರಾಮಗುಂಡಂನಲ್ಲಿ ಏರ್ಪಡಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸ್ಮೃತಿ ಇರಾನಿ, ಇನ್ನೂ ಎಷ್ಟು ದಿನಗಳ ಕಾಲ ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತೀರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

ಮುಂದುವರೆದು ಮಾತನಾಡುತ್ತಾ, ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿ ರಾಮ ಇರಲೇ ಇಲ್ಲ ಎಂದು ವಾದಿಸಿದ್ದರು. ಈಗ ಚುನಾವಣೆಗಾಗಿ ರಾಹುಲ್ ಗಾಂಧಿ ಅವರು ರಾಮ ನಾಮ ಜಪಿಸುವುದಷ್ಟೇ ಅಲ್ಲ, ಜತೆಗೆ ಶಿವ ಭಕ್ತರೂ ಆಗಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಸಹ, ತೆಲಂಗಾಣ ಸರ್ಕಾರ ಅವುಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಸ್ಮೃತಿ ಇರಾನಿ ಆರೋಪಿಸಿದರು.