ನವದೆಹಲಿ: ರಾಜ್ಯಸಭಾ ಸಂಸದ ಸ್ಥಾನಕ್ಕೆ ಮತ್ತು ಸಮಾಜವಾದಿ ಪಕ್ಷಕ್ಕೆ ಸೋಮವಾರ ರಾಜೀನಾಮೆ ನೀಡಿದ್ದ ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ನಿರಾಜ್ ಶೇಖರ್ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪಿ.ನಡ್ದಾ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರ್ಪಡೆಯಾದ ನೀರಜ್ ಶೇಖರ್, ಉತ್ತರಪ್ರದೇಶದ ಬಲ್ಲಿಯಾದಿಂದ ಎರಡು ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. ಅಲ್ಲದೆ, ಒಂದು ವರ್ಷಕ್ಕೂ ಹೆಚ್ಚು ಕಾಲ ರಾಜ್ಯಸಭೆ ಸದಸ್ಯರಾಗಿದ್ದರು.
ಇದೇ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ನೀರಜ್, "ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯ ಮಾಡಲು ಪ್ರಧಾನಿ ಮೋದಿ ಅವರ ಪಕ್ಷದಲ್ಲಿದ್ದರೆ ಮಾತ್ರ ಸಾಧ್ಯ. ಹಾಗಾಗಿ ಅವರ ಕೈಕೆಳಗೆ ಕೆಲಸ ಮಾಡಲು ಇಚ್ಚಿಸಿ, ಬಿಜೆಪಿಗೆ ಸೇರಿದ್ದೇನೆ" ಎಂದು ಹೇಳಿದರು.
"ಪಿಎಂ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರ ಆಶೀರ್ವಾದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಸಹಾಯ ಮಾಡಿದ ಮತ್ತು ಕೇಂದ್ರ ಅಧಿಕಾರಿಗಳೊಂದಿಗೆ ಮಾತನಾಡಿದ ಪಿಯೂಷ್ ಗೋಯಲ್ ಜಿ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ನೀರಜ್ ಶೇಖರ್ ಹೇಳಿದರು.
ವೈಯಕ್ತಿಕ ಕಾರಣಗಳಿಗಾಗಿ ರಾಜ್ಯಸಭಾ ಸಂಸದ ಸ್ಥಾನಕ್ಕೆ ಹಾಗೂ ಸಮಾಜವಾದಿ ಪಕ್ಷದ ಸದಸ್ಯ ಸ್ಥಾನಕ್ಕೆ ಸೋಮವಾರ ನೀರಜ್ ಶೇಖರ್ ಸಲ್ಲಿಸಿದ್ದ ರಾಜೀನಾಮೆಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸ್ವೀಕರಿಸಿದ್ದಾರೆ ಎನ್ನಲಾಗಿತ್ತು.
2007ರಲ್ಲಿ ನೀರಜ್ ಶೇಖರ್ ತಮ್ಮ ತಂದೆ ಚಂದ್ರಶೇಖರ್ ಅವರ ಕ್ಷೇತ್ರವಾದ ಉತ್ತರಪ್ರದೇಶದ ಬಲ್ಲಿಯಾದಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2009ರಲ್ಲಿಯೂ ಪುನರಾಯ್ಕೆಗೊಂಡಿದ್ದರು. ಆದರೆ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಮಾಜವಾದಿ ಪಕ್ಷ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ನೀರಜ್ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.