ಮುಂಬೈ: ಲೈಂಗಿಕ ಉದ್ದೇಶವಿಲ್ಲದೆ ಮಗುವಿನ ಕೆನ್ನೆ ಮುಟ್ಟುವುದು ಲೈಂಗಿಕ ದೌರ್ಜನ್ಯದ ಅಪರಾಧವಾಗುವುದಿಲ್ಲವೆಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 8 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ 46 ವರ್ಷದ ವ್ಯಕ್ತಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಬಾಂಬೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆಗಸ್ಟ್ 27ರಂದು ಈ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸಂದೀಪ್ ಶಿಂಧೆ ಅವರಿರುವ ಏಕಸದಸ್ಯ ನ್ಯಾಯಪೀಠವು ಪ್ರಕರಣದ ಆರೋಪಿ ಮೊಹಮ್ಮದ್ ಅಹ್ಮದ್ ಉಲ್ಲಾಗೆ ಜಾಮೀನು ಮಂಜೂರು ಮಾಡಿದೆ. 2020ರ ಜುಲೈ ತಿಂಗಳಿನಲ್ಲಿ ಥಾಣೆ ಜಿಲ್ಲೆಯ ರಾಬೋಡಿ ಠಾಣೆ ಪೊಲೀಸರು ಮೊಹಮ್ಮದ್ ಉಲ್ಲಾನನ್ನು ಬಂಧಿಸಿದ್ದರು.
‘ನನ್ನ ಅಭಿಪ್ರಾಯದ ಪ್ರಕಾರ ಲೈಂಗಿಕ ಉದ್ದೇಶವಿಲ್ಲದೆ ಮಕ್ಕಳ ಕೆನ್ನೆಗಳನ್ನು ಮುಟ್ಟುವುದು ಲೈಂಗಿಕ ದೌರ್ಜನ್ಯದ ಅಪರಾಧವಾಗುವುದಿಲ್ಲ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಈ ಬಗ್ಗೆ ವ್ಯಾಖ್ಯಾನಿಸಲಾಗಿದೆ’ ಎಂದು ನ್ಯಾಯಮೂರ್ತಿ ಸಂದೀಪ್ ಶಿಂಧೆ ಹೇಳಿದ್ದಾರೆ. ಈ ಪ್ರಕರಣದ ಆರೋಪಿಯಾಗಿರುವ ವ್ಯಕ್ತಿಯು ಲೈಂಗಿಕ ಉದ್ದೇಶದಿಂದ ಹೆಣ್ಣುಮಗುವಿನ ಕೆನ್ನೆ ಮುಟ್ಟಿರುವ ಬಗ್ಗೆ ದಾಖಲೆಗಳು ಸೂಚಿಸುತ್ತಿಲ್ಲವೆಂದು ಕೂಡ ಹೈಕೋರ್ಟ್ ತಿಳಿಸಿದೆ.
ಆದಾಗ್ಯೂ ನ್ಯಾಯಮೂರ್ತಿ ಶಿಂಧೆ ಮಾಡಿರುವ ಅವಲೋಕನಗಳನ್ನು ಈ ವಿಷಯದಲ್ಲಿ ಆರೋಪಿಯ ಜಾಮೀನಿಗಾಗಿ ಮಾತ್ರ ಅಭಿಪ್ರಾಯ ಎಂದು ಅರ್ಥೈಸಿಕೊಳ್ಳಬೇಕು. ಇತರ ವಿಷಯಗಳ ವಿಚಾರಣೆಯ ಮೇಲೆ ಇದು ಯಾವುದೇ ರೀತಿಯಲ್ಲಿ ಪ್ರಭಾವ ಬೀರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾಂಸ ಮಾರಾಟ ವ್ಯಾಪಾರಿಯಾಗಿದ್ದ ಮೊಹಮ್ಮದ್ ಉಲ್ಲಾ, ತನ್ನ ಅಂಗಡಿಗೆ ಬಂದಿದ್ದ 8 ವರ್ಷದ ಬಾಲಕಿಯ ಕೆನ್ನೆ ಸವರಿದ್ದರೆಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಮಹಿಳೆಯೊಬ್ಬರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಉಲ್ಲಾನನ್ನು ಕಳೆದ ವರ್ಷ ಜುಲೈನಲ್ಲಿ ಬಂಧಿಸಿದ್ದ ಪೊಲೀಸರು ನವಿಮುಂಬೈನ ತಲೋಜಾ ಜೈಲಿನಲ್ಲಿರಿಸಿದ್ದರು. ಜಾಮೀನು ಕೋರಿ ಆರೋಪಿ ಉಲ್ಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿಂಧೆ, ‘ಯಾವುದೇ ಲೈಂಗಿಕ ಉದ್ದೇಶವಿಲ್ಲದೇ ಬಾಲಕಿಯ ಕೆನ್ನೆ ಸ್ಪರ್ಶಿಸಿರುವುದು ಪೋಕ್ಸೊ ಕಾಯ್ದೆಯಡಿ ವಿವರಿಸಿರುವಂತೆ ಲೈಂಗಿಕ ದೌರ್ಜನ್ಯದ ಅಪರಾಧ ಅಂತಾ ಅನಿಸುತ್ತಿಲ್ಲ’ವೆಂದು ತಿಳಿಸಿದ್ದಾರೆ.
ಇದನ್ನೂ ಓದಿ: Indian Railways : ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ಮುನ್ನ ತಿಳಿದಿರಲಿ ಈ ಹೊಸ ನಿಯಮ : IRCTC ಯಿಂದ ಹೊಸ ರೂಲ್ಸ್ ಜಾರಿ
ತಮ್ಮ ವ್ಯವಹಾರದ ಪ್ರತಿಸ್ಪರ್ಧಿಗಳು ಬೇಕಂತಲೇ ನನ್ನ ವಿರುದ್ಧ ಈ ರೀತಿಯ ಆರೋಪ ಮಾಡಿದ್ದಾರೆಂದು ಉಲ್ಲಾ ಅವರು ತಮ್ಮ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು. ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ಅನೇಕ ವರ್ಷಗಳಿಂದ ನಾನು ಆ ಪ್ರದೇಶದಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದೇನೆ. ನನ್ನ ಬಗ್ಗೆ ಇಲ್ಲಿನ ಜನರು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ನನ್ನ ವಿರುದ್ಧ ಈ ರೀತಿ ಆರೋಪ ಮಾಡಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ ಅಂತಾ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.