ನವದೆಹಲಿ:ತ್ರಿವಳಿ ತಲಾಖ್ ಗೆ ಅಂಕುಶ ಹಾಕುವ ನಿಟ್ಟಿನಲ್ಲಿ ರಾಜ್ಯ ಸಭೆಯಲ್ಲಿ ಮಂಡಿಸಿದ್ದ ತ್ರಿವಳಿ ತಲಾಖ್ ನಿಷೇಧ ಮಸೂದೆ ಪ್ರತಿಪಕ್ಷಗಳ ವಿರೋಧ ಮಧ್ಯೆಯೂ ಅಂಗೀಕಾರವಾಗುವಲ್ಲಿ ಯಶಸ್ವಿಯಾಗಿದೆ. ಈ ಮಸೂದೆಯೂ ಪ್ರಮುಖವಾಗಿ ತಲಾಖ್ ಅನ್ನು ಮೂರು ಬಾರಿ ಉಚ್ಚರಿಸುವ ಮೂಲಕ ಮುಸ್ಲಿಂ ಪುರುಷರು ತಮ್ಮ ಹೆಂಡತಿಯರಿಗೆ ತಕ್ಷಣ ವಿಚ್ಚೇದನ ನೀಡುವ ಪ್ರಯತ್ನಕ್ಕೆ ಕೊನೆ ಹಾಡುತ್ತದೆ ಎನ್ನಲಾಗಿದೆ.
ರಾಜ್ಯಸಭೆಯಲ್ಲಿ ಮಸೂದೆ ಕುರಿತ ಮತ ತೀರ್ಮಾನದ ವೇಳೆ ಜೆಡಿಯು ಸಭಾತ್ಯಾಗ ಮಾಡಿದರೆ, ಟಿಆರ್ಎಸ್ ಮತದಾನದಿಂದ ತಟಸ್ಥ ಧೋರಣೆ ತಾಳಿತು. ಇದರಿಂದಾಗಿ ಸದನದ ಸಂಖ್ಯಾಬಲ ಕುಸಿದಿದ್ದರಿಂದಾಗಿ ಮಸೂದೆ ಅಂಗೀಕಾರಕ್ಕೆ ಸುಲಭವಾಯಿತು ಎನ್ನಲಾಗಿದೆ. ಇದಲ್ಲದೆ ಶರದ್ ಪವಾರ್, ಪ್ರಫುಲ್ ಪಟೇಲ್, ಕಾಂಗ್ರೆಸ್ ನ ನಾಲ್ಕು ಸಂಸದರು ಮತ್ತು ಸಮಾಜವಾದಿ ಪಕ್ಷದ ಇಬ್ಬರು ಸಂಸದರು ಸೇರಿದಂತೆ ಹಲವು ಪ್ರತಿಪಕ್ಷದ ನಾಯಕರು ಗೈರು ಹಾಜರಾಗಿದ್ದರಿಂದಾಗಿ ಪರೋಕ್ಷವಾಗಿ ಮಸೂದೆ ಅಂಗೀಕಾರಕ್ಕೆ ಸಹಾಯವಾಗಿದೆ. ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಪರವಾಗಿ 99 ಮತಗಳು ಬಂದರೆ ವಿರುದ್ಧವಾಗಿ 84 ಮತಗಳು ಬಂದವು.
Union Minister of Law & Justice Ravi Shankar Prasad: Today is a historic day. Both the Houses have given justice to the Muslim women. This is the beginning of a transforming India. #TripleTalaqBill pic.twitter.com/rXwPsfAtBF
— ANI (@ANI) July 30, 2019
ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಮಂಡಿಸಿದ ನಂತರ ಮಾತನಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ 'ಇದೊಂದು ಐತಿಹಾಸಿಕ ದಿನ. ಉಭಯ ಸದನಗಳು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿವೆ. ಇದು ಭಾರತದ ಪರಿವರ್ತನೆಯ ಆರಂಭಕ್ಕೆ ನಾಂದಿ ಹಾಡಿದೆ' ಎಂದರು.
ಕಳೆದ ವಾರ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ಟಿಆರ್ಎಸ್, ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಮತ್ತು ವೈಎಸ್ಆರ್ ಕಾಂಗ್ರೆಸ್ ಜಗನ್ಮೋಹನ್ ರೆಡ್ಡಿ ಪಕ್ಷದ ಸಹಾಯದಿಂದ ಅಂಗೀಕಾರ ಮಾಡಲು ಸಾಧ್ಯವಾಗಿತ್ತು. ಆಗ ಮಸೂದೆಯನ್ನು ವಿರೋಧಿಸುತ್ತಿದ್ದ ಟಿಆರ್‌ಎಸ್ ಮತ್ತು ಬಿಜು ಜನತಾದಳ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಕರೆಮಾಡಿ ಅವರ ಮನಸ್ಸು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.
ಇಂದು ತ್ರಿವಳಿ ತಲಾಖ್ ಮಸೂದೆ ಮಂಡಿಸುವ ತನ್ನ ನಿರ್ಧಾರವನ್ನು ಸಮರ್ಥಿಸಿದ ಕೇಂದ್ರ ಸರ್ಕಾರ, ಲಿಂಗ ಸಮಾನತೆ ಮತ್ತು ನ್ಯಾಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಸೂದೆ ಒಂದು ಮಹತ್ವದ ಹೆಜ್ಜೆಯಾಗಿದೆ.ಆದರೆ ವಿರೋಧ ಪಕ್ಷಗಳು ಈ ವಿಷಯವನ್ನು ರಾಜಕೀಯಗೊಳಿಸುತ್ತಿವೆ ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿತು.