ಕಳಹಂಡಿ: ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ಗ್ರಾಮಸ್ಥರು ಜೆಲಿಂಗಧೋರ ನದಿ ತೀರದಿಂದ ಕನಿಗುಮ ಗ್ರಾಮದವರೆಗೆ ಸುಮಾರು 12 ಕಿ.ಮೀ. ವರೆಗೆ ಗರ್ಭಿಣಿ ಮಹಿಳೆಯನ್ನು ಮಂಚದ ಮೇಲೆ ಕರೆದೊಯ್ದ ಘಟನೆ ಒಡಿಶಾದಲ್ಲಿ ನಡೆದಿದೆ.
ಆಗಸ್ಟ್ 21 ರಂದು ಒಡಿಶಾದ ಥುಮಲ್ ರಾಮ್ಪುರ್ ಗ್ರಾಮದಲ್ಲಿ 23 ವರ್ಷದ ಸೈಬನಿ ಗೌಂಡ್ ಎಂಬ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು(ಆಶಾ ಕಾರ್ಯಕರ್ತೆ) ಗರ್ಭಿಣಿ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದು ಶೀಘ್ರವೇ ಆಂಬುಲೆನ್ಸ್ ಕಳುಹಿಸುವಂತೆ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.
ದುರದೃಷ್ಟವಶಾತ್ ಜೆಲಿಂಗದೊರ ನದಿ ಸೇತುವೆ ಬಳಿ ರಸ್ತೆ ಸಂಪರ್ಕವಿಲ್ಲದ ಕಾರಣ ಆಂಬುಲೆನ್ಸ್ ನಿರ್ದಿಷ್ಟ ಸ್ಥಳ ತಲುಪಲು ಸಾಧ್ಯವಾಗಿಲ್ಲ. ಬಳಿಕ ಗ್ರಾಮಸ್ಥರು ಗರ್ಭಿಣಿ ಮಹಿಳೆ ಸೈಬನಿ ಅವರನ್ನು ಮಂಚದ ಮೇಲೆ ಹೊತ್ತು ನದಿಯ ಮೂಲಕ ನೆಹೇಲ ಗ್ರಾಮದಿಂದ 12 ಕಿ. ಮೀ. ದೂರವಿರುವ ಕನಿಗುಮ ಗ್ರಾಮದವರೆಗೆ ಕರೆದೊಯ್ದಿದ್ದಾರೆ.
ಒಡಿಶಾ ಕಳಹಂಡಿ ಜಿಲ್ಲೆಯಲ್ಲಿ ಥುಮುಲ್ ರಾಮ್ಪುರ್ ಗ್ರಾಮವು ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶವಾಗಿದ್ದು, ಸರ್ಕಾರ ಈ ಗ್ರಾಮವನ್ನು ಕಡೆಗಣಿಸಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಗ್ರಾಮಸ್ಥರು ಇಂತಹ ತೊಂದರೆಗೆ ತುತ್ತಾಗುತ್ತಲೇ ಇರುವುದಾಗಿ ಗ್ರಾಮಸ್ಥರು ದೂರಿದ್ದಾರೆ.
ಸ್ಥಳೀಯ ನಾಗರೀಕರ ಪ್ರಕಾರ, ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರು ಸೇತುವೆ ನಿರ್ಮಿಸುವುದಾಗಿ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಬಳಿಕ ಮುಂದಿನ ಚುನಾವಣೆವರೆಗೂ ಯಾವ ನಾಯಕರೂ ಈ ಕಡೆ ತಿರುಗಿಯೂ ನೋಡುವುದಿಲ್ಲ. ಪ್ರತಿ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವುದರಿಂದ ಸ್ಥಳೀಯ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜುಲೈನಲ್ಲಿ, ಇಲ್ಲಿನ ಬುಡಕಟ್ಟು ಜನಾಂಗದವರು ಕಳಹಂಡಿ ಜಿಲ್ಲೆಯ ಗುನುಪುರ್ ಗ್ರಾಮದಲ್ಲಿ ಚಿಕಿತ್ಸೆ ಸಂದರ್ಭದಲ್ಲಿ ಮೃತಪಟ್ಟ ತಮ್ಮ ಸಂಬಂಧಿ ನಿಗಿಡಿ ಮಜ್ಹಿ ಎಂಬುವವರ ಮೃತ ದೇಹವನ್ನು ಬಟ್ಟೆಯಿಂದ ಮಾಡಿದ ಜೋಲಿಯಲ್ಲಿ ಸಾಗಿಸಿದ್ದರು.
ಈ ಘಟನೆ ಬಳಿಕ ಹಲವು ನಾಯಕರು, ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಾದರೂ ರಸ್ತೆ ಸಂಪರ್ಕ ಕಲ್ಪಿಸಲು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ.