ರಾಯ್ ಬರೇಲಿ: ಬಿಜೆಪಿಗೆ ಸಹಾಯ ಮಾಡುವುದಕ್ಕಿಂತ ಸಾಯುವುದೇ ಮೇಲು ಎಂದು ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 ಕಾಂಗ್ರೆಸ್ ಪಕ್ಷಕ್ಕೆ 'ಮಾಡು ಇಲ್ಲವೇ ಮಡಿ' ಎಂಬಂತಾಗಿದೆ. ಕಾಂಗ್ರೆಸ್ ಪಕ್ಷದ ದುರ್ಬಲ ಅಭ್ಯರ್ಥಿಗಳು ಬಿಜೆಪಿ ಮತಗಳಿಗೆ ಕನ್ನಾ ಹಾಕಲಿದ್ದಾರೆ ಎಂದು ಹೇಳಿದ್ದ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ ಎಂದಿರುವ ಪ್ರಿಯಾಂಕಾ ಗಾಂಧಿ, ಬಿಜೆಪಿಗೆ ಸಹಾಯ ಮಾಡುವುದಕ್ಕಿಂತ ಸಾಯುವುದು ಮೇಲು ಎಂದಿದ್ದಾರೆ.
"ಕಾಂಗ್ರೆಸ್ ತನ್ನದೇ ಆದ ಶಕ್ತಿಯ ಮೇಲೆ ಚುನಾವಣೆಯಲ್ಲಿ ಹೋರಾಡುತ್ತಿದೆ ಎಂದು ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ, ನಮ್ಮ ಅಭ್ಯರ್ಥಿಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಪ್ರಬಲವಾಗಿ ಹೋರಾಡುತ್ತಿದ್ದಾರೆ, ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತ ಹೆಚ್ಚಾಗಿ ನಾನು ಸಾಯುತ್ತೇನೆ" ಎಂದ ಪ್ರಿಯಾಂಕಾ, ಕಾಂಗ್ರೆಸ್ ಪಕ್ಷ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ. ಈ ಎರಡೂ ಪಕ್ಷಗಳ ಸಿದ್ಧಾಂತಗಳು ಬೇರೆ ಬೇರೆ ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಉತ್ತರಪ್ರದೇಶದಲ್ಲಿ ಮಹಘಟಬಂಧನ್ ಸೋಲಿಗೆ ಒಟ್ಟಿಗೆ ಕೆಲಸ ಮಾಡುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ಬಟ್ಟೆಯನ್ನು ಹರಿದು ಹೊಲೆದುಕೊಂಡಿರುವ ಪಕ್ಷಗಳು. ಸಂಸತ್ನಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನು ಹೇಗೆ ತಬ್ಬಿಕೊಂಡಿದ್ದರು ಎಂಬುದನ್ನು ಇಡೀ ರಾಷ್ಟ್ರವೇ ನೋಡಿದೆ. ಹೀಗಾಗಿ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ಗೂ ಮತ ನೀಡಬೇಡಿ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದರು. ಈ ಬೆನ್ನಲ್ಲೇ ಪ್ರಿಯಾಂಕಾ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ಉತ್ತರಪ್ರದೇಶದಲ್ಲಿ ಪ್ರಚಾರದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕಾ, ಕಾಂಗ್ರೆಸ್‌ನ ದುರ್ಬಲ ಅಭ್ಯರ್ಥಿಗಳು ಬಿಜೆಪಿಯ ಮತಗಳನ್ನು ಸೆಳೆಯುವ ಮೂಲಕ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಮೈತ್ರಿಕೂಟಕ್ಕೆ ನೆರವಾಗಲಿದ್ದಾರೆ. ಹಾಗೆಂದು ನಾವು ಎಲ್ಲಾ ಕಡೆ ದುರ್ಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿಲ್ಲ. ಪೂರ್ವ ಉತ್ತರ ಪ್ರದೇಶದಲ್ಲಿ ಒಬ್ಬನೇ ಒಬ್ಬ ದುರ್ಬಲ ಅಭ್ಯರ್ಥಿ ಇಲ್ಲ. ಆಯ್ಕೆ ಆದ ಅಭ್ಯರ್ಥಿಗಳು ಬಿಜೆಪಿಯ ಮತಗಳನ್ನು ಕಸಿಯಬಲ್ಲರು ಎಂದು ಹೇಳಿಕೆ ನೀಡಿದ್ದರು.