ಲಕ್ನೋ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಬಹುನಿರೀಕ್ಷಿತ ಕ್ಯಾಬಿನೆಟ್ ಪುನರ್ರಚನೆಯನ್ನು ಮುಂದೂಡಲಾಗಿದೆ.
ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿಯವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವ ವರದಿಯ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ಪುನರ್ರಚನೆಯನ್ನು ಮುಂದೂಡಲಾಗಿದೆ.
ಭಾನುವಾರವೇ ಪ್ರಾರಂಭವಾಗಿದ್ದ ಕ್ಯಾಬಿನೆಟ್ ಪುನರ್ ರಚನೆ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳನ್ನು ಭಾನುವಾರ ತಡರಾತ್ರಿ ಸ್ಥಗಿತಗೊಳಿಸಲಾಗಿದ್ದು, ಶಾಸಕರಿಗೆ ವಿಷಯ ಮುಟ್ಟಿಸಲಾಗಿದೆ. ಆಮಂತ್ರಣ ಪತ್ರಗಳ ವಿತರಣೆಯನ್ನೂ ಸಹ ಭಾನುವಾರ ನಿಲ್ಲಿಸಲಾಗಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಮುಂದೂಡುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರ್ಚ್ 2017ರಲ್ಲಿ ರಚನೆಯಾದ ನಂತರ ಇದು ಯೋಗಿ ಸರ್ಕಾರದ ಮೊದಲ ಕ್ಯಾಬಿನೆಟ್ ಪುನರ್ರಚನೆಯಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಒಟ್ಟು 43 ಸಚಿವರನ್ನು ಹಿಂದಿದೆ. ಇಬ್ಬರು ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಸೇರಿದಂತೆ 18 ಕ್ಯಾಬಿನೆಟ್ ಮಂತ್ರಿಗಳು, ಸ್ವತಂತ್ರ ಉಸ್ತುವಾರಿ ಹೊಂದಿರುವ 9 ರಾಜ್ಯ ಸಚಿವರು ಮತ್ತು 13 ರಾಜ್ಯ ಸಚಿವರಿದ್ದಾರೆ.