ಬಿಜೆಪಿಯ ಆಂತರಿಕ ಕುತಂತ್ರದಿಂದ ಯಡಿಯೂರಪ್ಪ ಮನೆ ಮೇಲೆ ದಾಳಿ: ಡಿ.ಕೆ. ಶಿವಕುಮಾರ್

DK Shivakumar : ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸುವ ಬಿಜೆಪಿಯ ಆಂತರಿಕ ಕುತಂತ್ರದ ಭಾಗವಾಗಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

Written by - Prashobh Devanahalli | Edited by - Chetana Devarmani | Last Updated : Mar 28, 2023, 02:11 PM IST
  • ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸುವ ತಂತ್ರ
  • ಬಿಜೆಪಿಯ ಆಂತರಿಕ ಕುತಂತ್ರದ ಭಾಗವಾಗಿ ಮನೆ ಮೇಲೆ ದಾಳಿ ನಡೆಸಲಾಗಿದೆ
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿರುಗೇಟು
ಬಿಜೆಪಿಯ ಆಂತರಿಕ ಕುತಂತ್ರದಿಂದ ಯಡಿಯೂರಪ್ಪ ಮನೆ ಮೇಲೆ ದಾಳಿ: ಡಿ.ಕೆ. ಶಿವಕುಮಾರ್  title=
DK Shivakumar

ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಗೊಂದಲ ಮೂಡಿಸಿರುವವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಜನ ತಮಗೆ ಅನ್ಯಾಯ ಆದಾಗ ಅಧಿಕಾರದಲ್ಲಿರುವವರ ಮೇಲೆ ಆಕ್ರೋಶ ವ್ಯಕ್ತಪಡಿಸುವುದು ಸಹಜ. ಆದರೆ, ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳು, ಸಚಿವರ ಮನೆ ಮೇಲೆ ದಾಳಿ ಆಗದೆ ಯಾವುದೇ ಅಧಿಕಾರ ಇಲ್ಲದ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ಆಗಿದೆ ಎಂದರೆ ಇದು ಬಿಜೆಪಿಯ ಕುತಂತ್ರಕ್ಕೆ ಸಾಕ್ಷಿಯಲ್ಲದೆ ಮತ್ತೇನೂ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಯಡಿಯೂರಪ್ಪ ಅವರ ಮನೆ ಮೇಲೆ ನಡೆದ ದಾಳಿ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಗಮನ ಸೆಳೆದಾಗ ಅವರು ಹೀಗೆ ಪ್ರತಿಕ್ರಿಯಿಸಿದರು. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿತ್ತು. ಈಗ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರ ಮನೆಗೆ ಹೋಗಿ ಅವರ ಜತೆ ಉತ್ತಮ ಸಂಬಂಧ ಹೊಂದಿರುವಂತೆ ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಆಂತರಿಕವಾಗಿ ಯಡಿಯೂರಪ್ಪ ಅವರನ್ನು ನಿಯಂತ್ರಿಸಲು ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ನಾನು ಈಗ ಆ ವಿಚಾರದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ವ್ಯಾಖ್ಯಾನಿಸಿದರು.

ಇದನ್ನೂ ಓದಿ : "ಸಿಟಿ" ರವಿಗೂ "ಓಟಿ" ಮದ್ಯಕ್ಕೂ ಯಾವ ಜನ್ಮದ ಮೈತ್ರಿ!?: ಕಾಂಗ್ರೆಸ್ ವ್ಯಂಗ್ಯ

ಈ ಮೀಸಲಾತಿ ವಿಚಾರ ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಗೊಂದಲ ಮೂಡಿಸಿದೆ. ಬೇರೆ ರಾಜ್ಯಗಳಲ್ಲಿ ಈಗಾಗಲೇ ಇಂತಹ ಗೊಂದಲದ ಮೀಸಲಾತಿ ತಂದಾಗ ಅದರ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಆದರೂ ಈ ಸರ್ಕಾರ ಜನರಿಗೆ ವಂಚಿಸಲು ಇಬ್ಬರು ಸಚಿವರೇ ಕೂತು ಈ ಸುಳ್ಳು ಮೀಸಲಾತಿಗೆ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಯಾವ ವರದಿ ಆಧಾರದ ಮೇಲೆ ಸರ್ಕಾರ ಈ ತೀರ್ಮಾನ ಮಾಡಿದೆ? ಹಿಂದುಳಿದ ವರ್ಗಗಳ ಆಯೋಗ ಕಳೆದ ಡಿಸೆಂಬರ್ ನಲ್ಲಿ ನೀಡಿದ ಮಧ್ಯಂತರ ವರದಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿ ಎಂದು ತಿಳಿಸಿದೆಯೇ? ಮಧ್ಯಂತರ ವರದಿ ಮೇಲೆ ಮೀಸಲಾತಿ ಹೆಚ್ಚಳ ಮಾಡಲು ಸಾಧ್ಯವೇ? ಮೀಸಲಾತಿ ಹೆಚ್ಚಳವಾಗಲಿ ಅಥವಾ ಒಳ ಮೀಸಲಾತಿ ಆಗಲಿ, ಸರಿಯಾದ ಅಧ್ಯಯನ ವರದಿ ಆಧರಿಸಿ, ಸಂವಿಧಾನದಲ್ಲಿ ತಿದ್ದುಪಡಿ ತಂದು ಜಾರಿಗೆ ತರಬೇಕೆ ಹೊರತು ಕೇವಲ ಚುನಾವಣೆ ಗಿಮಿಕ್ ಮಾಡಲು ಏಕಾಏಕಿ ಆದೇಶ ನೀಡಿದರೆ ಜಾರಿಗೆ ಬರುವುದಿಲ್ಲ. ಅಲ್ಪಸಂಖ್ಯಾತರ ಮೀಸಲಾತಿ ಕಸಿದು ನಮಗೆ ನೀಡಿ ಎಂದು ಒಕ್ಕಲಿಗ ಹಾಗೂ ಲಿಂಗಾಯತ ಸ್ವಾಮೀಜಿಗಳು ಕೇಳಿದ್ದರೇ? ಒಕ್ಕಲಿಗರು ಹಾಗೂ ಲಿಂಗಾಯತರು ತಮ್ಮ ಜನಸಂಖ್ಯೆ ಆಧಾರದ ಮೇಲೆ ಕ್ರಮವಾಗಿ 12% ಹಾಗೂ 15% ಹೆಚ್ಚಳಕ್ಕೆ ಬೇಡಿಕೆ ಇಡಲಾಗಿತ್ತು. ಮುಸಲ್ಮಾನರಿಂದ ಕಸಿದು 2% ಮೀಸಲಾತಿಗೆ ಬೇಡಿಕೆ ಇಟ್ಟಿರಲಿಲ್ಲ. ಈಗಾಗಲೇ ಮೀಸಲಾತಿ 56% ಆಗಿದ್ದು, ಒಕ್ಕಲಿಗರು ಲಿಂಗಾಯತರು ಮೀಸಲಾತಿ ಸೇರಿಸಿ ವಿಸ್ತರಣೆ ಮಾಡಲಿ ಎಂದು ಹೇಳಿದರು.

ಅಲ್ಪಸಂಖ್ಯಾತರ ಮೀಸಲಾತಿ ಕಸಿದಿರುವ ಬಗ್ಗೆ ಜೆಡಿಎಸ್ ನಾಯಕರಾದ ಸಿ.ಎಂ ಇಬ್ರಾಹಿಂ ಅವರು ಇದುವರೆಗೂ ಏನು ಮಾತನಾಡಿಲ್ಲ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಮೀಸಲಾತಿ ಬದಲಾವಣೆ ಮಾಡಬಾರದು ಎಂದು ಆಗ್ರಹಿಸುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು, ಒಕ್ಕಲಿಗರು, ಲಿಂಗಾಯತರ ಹಿತ ಕಾಯುವ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಸಿಎಂ ಬಲಗೈ ಭಂಟ ಕಾಂಗ್ರೆಸ್ ಸೇರ್ಪಡೆ, ಬಿಜೆಪಿ ಶೋಚನೀಯ ಸ್ಥಿತಿಗೆ ಸಾಕ್ಷಿ: ಡಿ.ಕೆ.ಶಿವಕುಮಾರ್

ಮಾಡಾಳ ವಿರೂಪಾಕ್ಷಪ್ಪ ಅವರ ಬಂಧನದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಲೋಕಾಯುಕ್ತ ಪೊಲೀಸರು ಕಾನೂನಿನ ಪ್ರಕಾರ ಕರ್ತವ್ಯ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಕೆಲಸ ಅವರು ಮಾಡಲಿ. ಇಷ್ಟು ದಿನ ಬಿಜೆಪಿ ಸರ್ಕಾರ ಅವರನ್ನು ರಕ್ಷಣೆ ಮಾಡಿತ್ತು. ಆತನಿಗೆ ನಿರೀಕ್ಷಣಾ ಜಾಮೀನು ಸಿಗುವವರೆಗೂ ಬಂಧಿಸಿರಲಿಲ್ಲ ಎಂದರು.

ಇನ್ನು ಎರಡನೇ ಅಭ್ಯರ್ಥಿ ಪಟ್ಟಿಯಲ್ಲಿ ಗೊಂದಲ ಇದೆಯೇ ಎಂದು ಕೇಳಿದ ಪ್ರಶ್ನೆಗೆ, ಮಾರ್ಚ್ 30ರ ನಂತರ ಪಟ್ಟಿ ಬಿಡುಗಡೆ ಮಾಡಲಾಗುವುದು. ಮೊದಲ ಪಟ್ಟಿಯಲ್ಲಿ ಯಾವುದಾದರೂ ಗೊಂದಲ ಕಾಣುತ್ತಿದೆಯೆ? ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.

ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮನ್ನು ಸಂಪರ್ಕಿಸಿವೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ ಅದಕ್ಕೆ ಉತ್ತರಿಸಿದ ಶಿವಕುಮಾರ್ ಅವರು, 'ದು ಸುಳ್ಳು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದ್ದು, ಯಾರ ಬೆಂಬಲವನ್ನು ಪಡೆಯುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ಯಾರನ್ನು ಸಂಪರ್ಕ ಮಾಡಿಲ್ಲ. ಅವರನ್ನು ಯಾರೂ ಸಂಪರ್ಕಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News