ಜನವರಿ 1 ರಿಂದ ಮೈಸೂರಿನಲ್ಲಿ 12 ಇಂದಿರಾ ಕ್ಯಾಂಟೀನ್

ಒಂದು ಲಕ್ಷ ಜನಸಂಖ್ಯೆಗೆ ಒಂದರಂತೆ ಇಂದಿರಾ ಕ್ಯಾಂಟೀನ್ ತೆರೆಯಲಾಗುತ್ತಿದೆ. 

Last Updated : Oct 17, 2017, 09:56 AM IST
ಜನವರಿ 1 ರಿಂದ ಮೈಸೂರಿನಲ್ಲಿ 12 ಇಂದಿರಾ ಕ್ಯಾಂಟೀನ್  title=

ಮೈಸೂರು : ಜನವರಿ ಒಂದರಿಂದ ಮೈಸೂರು ನಗರದಲ್ಲಿ 12 ಇಂದಿರಾ ಕ್ಯಾಂಟೀನ್ ಗಳು ಆರಂಭವಾಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಸೋಮವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ರವೀಂದ್ರನಾಥ ಠಾಗೋರ್ ನಗರದಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆಯಲ್ಲಿ ನಿವೇಶನಗಳನ್ನು ಪಡೆದವರಿಗೆ ಲಾಟರಿ ಎತ್ತುವ ಮೂಲಕ ನಿವೇಶನದ ಸಂಖ್ಯೆಗಳನ್ನು ವಿತರಿಸಿ ಸಿಎಂ ಮಾತನಾಡಿದರು‌. 

ಒಂದು ಲಕ್ಷ ಜನಸಂಖ್ಯೆಗೆ ಒಂದರಂತೆ ಇಂದಿರಾ ಕ್ಯಾಂಟೀನ್ ತೆರೆಯಲಾಗುತ್ತಿದೆ. ಬೆಂಗಳೂರು ನಗರದಲ್ಲಿ 200 ಸೇರಿದಂತೆ ರಾಜ್ಯಾದ್ಯಂತ ಒಟ್ಟು 500 ಕ್ಯಾಂಟೀನ್ ತೆರೆಯಲಾಗುವುದು ಎಂದರು.

ಮೈಸೂರು ನಗರದಲ್ಲಿ ಬಸ್ ನಿಲ್ದಾಣ, ಆಸ್ಪತ್ರೆ, ಮಾರುಕಟ್ಟೆ ಮತ್ತಿತರ ಜನನಿಬಿಡ ಪ್ರದೇಶದಲ್ಲಿ ಕ್ಯಾಂಟೀನ್ ಆರಂಭವಾಗಲಿದೆ ಎಂದು ಸಿಎಂ ತಿಳಿಸಿದರು.

ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದೆ. 

ಬಹಳ ವರ್ಷಗಳ ಬಳಿಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ  ವತಿಯಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ವರ್ಷಾಂತ್ಯದ ವೇಳೆಗೆ ಐದು ಸಾವಿರ ನಿವೇಶಗಳನ್ನು ಹಂಚಿಕೆ ಮಾಡಲಾಗುವುದು. ಈ ಸಂಬಂಧ ಮೂಡಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರ್.ಟಿ.ನಗರ ಬಡಾವಣೆ ಮೈಸೂರಿನ ಉತ್ತಮ ಬಡಾವಣೆಗಳಲ್ಲಿ ಒಂದು. ಈ ಬಡಾವಣೆ ಸುಸಜ್ಜಿತವಾಗಿದೆ. 2270 ನಿವೇಶನಗಳನ್ನು ಬಡಾವಣೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಎರಡು, ಮೂರು ಬಡಾವಣೆಯಲ್ಲಿ ನಿವೇಶನಗಳನ್ನು ವಿತರಿಸಲಾಗುವುದು. ಗುಂಪು ಮನೆಗಳನ್ನೂ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿಗಳು  ವಿವರಿಸಿದರು. 

ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಬಳಿಕ ಹೊಸದಾಗಿ ರಚನೆಯಾಗುವ ಬಡಾವಣೆಗಳನ್ನು ಮೂಡಾ ಅಧಿಕಾರಿಗಳು ಪಾಲಿಕೆಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ಜನರಿಗೆ ತೊಂದರೆಯಾಗುತ್ತದೆ. 

ಮೂಡಾ ಬಡಾವಣೆಗಳಿಗೆ ಜಮೀನು ಕೊಟ್ಟಿರುವ ರೈತರ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಸೂಚಿಸಿದ್ದೇನೆ. 58 ಹಳ್ಳಿಗಳಲ್ಲಿ ಕಾಮಗಾರಿ ನಡೆಯುತ್ತಿದೆ. 

ಮೈಸೂರು ನಗರದಲ್ಲಿ ನಮ್ಮ ಸರ್ಕಾರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. 

ಜಯದೇವ ಆಸ್ಪತ್ರೆ, ದೇವರಾಜ ಮಾರ್ಕೆಟ್, ಮಹಾರಾಣಿ ಕಾಲೇಜಿಗೆ ಹೊಸ ಕಟ್ಟಡ, ಬಾಲಕಿಯರ ವಿದ್ಯಾರ್ಥಿ ನಿಲಯ, ಭವನಗಳು, ಜಿಲ್ಲಾ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು, ಜಿಲ್ಲಾಡಳಿತ ಭವನ, ಚಾಮುಂಡಿ ಬೆಟ್ಟದಲ್ಲಿ ಮೂಲಭೂತ ಸೌಕರ್ಯ, ರಸ್ತೆಗಳ ಸುಧಾರಣೆ, ಈ ಎಲ್ಲವೂ ನಮ್ಮ ಸರ್ಕಾರದ ಕೊಡುಗೆ ಎಂದು ಇದೇ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಭಿವೃದ್ಧಿ ಕೆಲಸಗಳನ್ನು ಇನ್ನೂ ಮಾಡುತ್ತೇವೆ. ಆದರೆ, ಜನರ ಆಶೀರ್ವಾದ ಬೇಕು. ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಜನ ಐದು ಬಾರಿ ನನಗೆ ಆಶೀರ್ವಾದ ಮಾಡಿದ್ದಾರೆ. ಕೊನೆಯ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧೆ ಮಾಡುವುದಾಗಿ ಸಿಎಂ ತಿಳಿಸಿದರು.

Trending News