Dragon Fruit In A Barren Land: ಪಾಳು ಬಿದ್ದ ಬಂಜರು ಭೂಮಿಯಲ್ಲಿ ಯುವಕನೋರ್ವ ವಿದೇಶಿ ಡ್ರ್ಯಾಗನ್ ಪ್ರೂಟ್ ಬೆಳೆದು ಸೈ ಎನಿಸಿಕೊಂಡಿದ್ದಾನೆ. ಈತನ ಕೃಷಿ ಸಾಧನೆಗೆ ಕೃಷಿ ತಂತ್ರಜ್ಞರು ಫುಲ್ ಖುಷಿಯಾಗಿದ್ದಾರೆ. ಹಾಗಿದ್ರೇ ಇಂಥ ಸಾಧನೆಗೈದ ಸಾಧಕ ಯಾರು ಅಂತೀರಾ ಈ ಸ್ಟೋರಿಯನ್ನು ಒಮ್ಮೆ ಓದಿ...
ಹೌದು, ಉತ್ತರಕನ್ನಡ ಜಿಲ್ಲೆಯ ಭಟ್ಕಳ ಗ್ರಾಮದ ಯುವ ರೈತನೊಬ್ಬ ಚೀನಾ ದೇಶದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ರುಚಿ, ಶುಚಿಯಾದ, ಔಷಧಿ ಗುಣವುಳ್ಳ ಡ್ರ್ಯಾಗನ್ ಪ್ರೂಟ್ ಹಣ್ಣಿನ ಗಿಡಗಳನ್ನು ತನ್ನ ತಾಯ್ನೆಲದಲ್ಲಿ ನೆಟ್ಟು ಯಶಸ್ಸು ಕಂಡಿದ್ದಾನೆ. ಭೂಮಿ ಪಾಳು ಬಿಡುವ ರೈತರಿಗೆ, ನಿರುದ್ಯೋಗದ ಸಮಸ್ಯೆಯನ್ನು ಸದಾ ಬಡಬಡಿಸಿ ಜೀವನ ಕಳೆಯುವ ನಿರುದ್ಯೋಗಿಗಳಿಗೆ ಕರ್ಮಯೋಗದ ಪಾಠವನ್ನು ಕೃಷಿ ಸಾಧಕ ಹೇಳಿ ಕೊಟ್ಟಿದ್ದಾನೆ.
ಈ ಯುವ ಕೃಷಿ ಸಾಧಕನ ಹೆಸರು ಅನಿಲ್ ಹೊನ್ನಪ್ಪ ನಾಯ್ಕ. ಈತ ಭಟ್ಕಳ ತಾಲೂಕಿನ ಚಿತ್ತಾಪುರ ಬಡ್ಡುಕುಳಿ ನಿವಾಸಿಯಾಗಿದ್ದಾನೆ. 10ನೇ ತರಗತಿಯವರೆಗೆ ಓದಿಕೊಂಡಿರುವ ಅನಿಲ್ ಜೀವನದಲ್ಲಿ ಸಾಧನೆ ಮಾಡಬೇಕೆಂದು ಫಣ ತೊಟ್ಟು ಕೃಷಿಯನ್ನು ಸಾಧಕ ಮತ್ತು ಕಾಯಕವನ್ನಾಗಿ ಆರಿಸಿಕೊಂಡನು. ಕೃಷಿ ಬಗ್ಗೆ ಗಮನ ಸೆಳೆಯುವಂತಹ ಅಧ್ಯಯನಶೀಲ ಮಾಡಲು ಹೊರಟ ಅನಿಲ್ ಸಾಕಷ್ಟು ಭೂಮಿ ಇದ್ದರೂ, ನೀರಿನ ಕೊರತೆ ಇರುವುದನ್ನು ಮನಗಂಡು, ಇಂತಹ ಭೂಮಿಯಲ್ಲಿ ಏನು ಬೆಳೆಯಬಹುದು ಎಂದು ಯೂಟ್ಯೂಬ್ ನಂತಹ ಸಾಮಾಜಿಕ ಜಾಲ ತಾಣಗಳಲ್ಲಿ ಹುಡುಕಾಟ ನಡೆಸಿದ್ದಾನೆ. ಆಗ ಆತನ ಕಣ್ಣಿಗೆ ಕಂಡಿದ್ದೇ ಡ್ರ್ಯಾಗನ್ ಪ್ರೂಟ್.
ಇದನ್ನೂ ಓದಿ- ಕೃಷ್ಣಾ ಬೀಮಾ ಒಡಲಲ್ಲಿ ಕೈ ಕೊಟ್ಟ ಮುಂಗಾರು
ನಂತರ, ಈತ ಈ ಡ್ರ್ಯಾಗನ್ ಬೆಳೆಯ ಬಗ್ಗೆ ಏನಿಲ್ಲ ಎಂದರೂ 6 ತಿಂಗಳು ಅಧ್ಯಯನ ನಡೆಸಿದ್ದಾನೆ. ಬಳಿಕ ತನ್ನ ಹೊಲದಲ್ಲಿರುವ ಆಕೇಶಿಯಾ ಗಿಡಮರಗಳನ್ನೆಲ್ಲ ಕಿತ್ತು ಅದೇ ಜಾಗದಲ್ಲಿ ಡ್ರ್ಯಾಗನ್ ಬೆಳೆಯಲು ಚಿಂತನೆ ನಡೆಸಿದ್ದಾನೆ. ಆಗ ಬೆಂಗಳೂರಿನಲ್ಲಿರುವ ಈತನ ಗೆಳೆಯರೋರ್ವರು ನೆರವಿಗೆ ಬಂದಿದ್ದಾರೆ. ಆತನ ಸಲಹೆ ಮೇರೆಗೆ ಬೆಂಗಳೂರು ಯಲಹಂಕ ಭಾಗದಲ್ಲಿ ಡ್ರ್ಯಾಗನ್ ಬೆಳೆದು ಯಶ ಕಂಡಿರುವ ಶ್ರೀನಿವಾಸ ರೆಡ್ಡಿ, ಅವರ ಸಹೋದರ ವೇಣುಗೋಪಾಲ ಅವರನ್ನು ಸಂಪರ್ಕಿಸಿ ತನ್ನ ಅಭಿಲಾಷೆಯನ್ನು ತಿಳಿಸಿದ್ದಾನೆ. ಆದರೆ ಅವರು ಡ್ರ್ಯಾಗನ್ ಬೆಳೆಯುವ ಮೊದಲು ತಮ್ಮ ತೋಟಕ್ಕೆ ಭೇಟಿ ನೀಡಿ, ತರಬೇತಿ ಪಡೆದು ನಂತರ, ಭಟ್ಕಳದಲ್ಲಿ ಕೃಷಿ ಕಾಯಕ ಮುಂದುವರೆಸುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪಿದ ಅನಿಲ್ ನಾಯ್ಕಗೆ ಈಗ ಈ ಬೆಳೆ ವರದಾನವಾಗಿ ಪರಿಣಮಿಸಿದೆ.
ಅನಿಲ್ ನಾಯ್ಕ ತನಗಿರುವ ಎರಡು ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಬೆಳೆಯನ್ನು ಬೆಳೆದಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ಪಕ್ಕದ ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ಡ್ಯಾಗನ್ ಬೆಳೆಯನ್ನು ಪರಿಚಯಿಸಲಾಗುತ್ತಿದೆ. ಭಟ್ಕಳದ ಕೋಣಾರ ಸೇರಿದಂತೆ ಜಿಲ್ಲೆಯ ಒಂದೆರಡು ಕಡೆ ಚಿಕ್ಕ ಪ್ರಮಾಣದಲ್ಲಿ ಡ್ರ್ಯಾಗನ್ ಬೆಳೆಯ ಪ್ರಯತ್ನ ನಡೆಸಲಾಗಿದೆಯಾದರೂ, ನಿರೀಕ್ಷಿತ ಫಲ ನೀಡಿಲ್ಲ. ಅಷ್ಟಕ್ಕೂ ಇವರು ಇಷ್ಟೆಲ್ಲಾ ಸಾಹಸ ಮಾಡುವಾಗ ಭಟ್ಕಳದ ಮಣ್ಣಿನಲ್ಲಿ ಇದು ಇಷ್ಟು ಉತ್ತಮ ಫಸಲು ಕೊಡುತ್ತೆ ಎನ್ನುವುದರ ಬಗ್ಗೆ ಯಾವುದೇ ಗ್ಯಾರಂಟಿ ಕೂಡ ಇರಲಿಲ್ಲ. ಆದರೂ ಕೂಡ ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸಿ ಇಂತದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಅನಿಲ್ ನಾಯ್ಕ.
ಅಕ್ಷರಶಃ ಬೆವರಿನ ಜತೆ ರಕ್ತ ಹರಿಸಿ ಈ ಗಿಡಕ್ಕೆ ಆಧಾರ ಕಂಬ ಮಾಡುವ ಕೆಲಸದಿಂದ ಹಿಡಿದು ಇದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸವನ್ನು ತಾವೇ ಸ್ವತಃ ತಮ್ಮ ಬಾಮೈದನೊಡಗೂಡಿ ಆಳಾಗಿ ದುಡಿದು ಈ ಸಾಧನೆಯನ್ನು ಮಾಡಿದ್ದಾರೆ ಅನಿಲ್ ನಾಯ್ಕ.
ಇದನ್ನೂ ಓದಿ- ಪುರುಷ ಪ್ರಯಾಣಿಕರ ಗೋಳು ಕೇಳೋರು ಯಾರು?
ಈಗ ಒಂದು ಏಕರೆ ಪ್ರದೇಶದಲ್ಲಿ ಗಿಡಗಳು ಅದಾಗಲೇ ಹಣ್ಣು ಬಿಡಲು ಶುರು ಮಾಡಿದ್ದು ಇಡೀ ಹೊಲ ಗುಲಾಬಿ ಬಣ್ಣದ ಚೆಂಡು ಹೊತ್ತುಕೊಂಡು ನಿಂತಂತೆ ಕಾಣಿಸುತ್ತಿದೆ. ಈ ಹೊಲವನ್ನು ನೋಡುವಾಗ ನಿಜಕ್ಕೂ ಅನಿಲ್ ಅವರ ಪರಿಶ್ರಮ ಎದ್ದು ಕಾಣುತ್ತದೆ.
ಡ್ರ್ಯಾಗನ್ ಬೆಳೆಯ ನೀರಿನ ಬೇಡಿಕೆಯನ್ನು ಪೂರೈಸಿಕೊಳ್ಳಲು ಇದೇ ತೋಟದ ಪಕ್ಕದಲ್ಲಿಯೇ ನೀರು ಸಂಗ್ರಹ ಕೆರೆಯೊಂದನ್ನು ವೈಜ್ಞಾನಿಕವಾಗಿ ನಿರ್ಮಿಸಿ, ಮಳೆಗಾಲದ ನೀರನ್ನು ವರ್ಷ ಪೂರ್ತಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಗೊಬ್ಬರ ತಯಾರಿಕೆಗೂ ಪ್ರತ್ಯೇಕ ಗುಂಡಿ ಕೊರೆದಿದ್ದಾರೆ. ಕುರಿ, ಕೋಳಿ ಗೊಬ್ಬರ, ಬೇವು ಹಿಂಡಿ, ಜೈವಿಕ ಗೊಬ್ಬರಗಳ ಮಿಶ್ರಣದೊಂದಿಗೆ ಗೊಬ್ಬರವನ್ನು ಸಿದ್ಧಪಡಿಸಲಾಗುತ್ತದೆ. ವರ್ಷದಲ್ಲಿ 6 ತಿಂಗಳು ಅಂದರೆ ಮೇ ತಿಂಗಳಿನಿಂದ ನವೆಂಬರ ವರೆಗೂ ಇಳುವರಿ ಕಾಣಬಹುದಾಗಿದೆ.
ಮಾರುಕಟ್ಟೆಗೆ ಬಂದ ಅನಿಲ್ ತೋಟದ ಡ್ರ್ಯಾಗನ್!
ಡ್ರ್ಯಾಗನ್ ಹಣ್ಣು ಔಷಧಿಯ ಗುಣವನ್ನು ಹೊಂದಿದ್ದು, ಬಿಪಿ, ಶುಗರ್, ಮಲಬದ್ಧತೆ ಇತ್ಯಾದಿ ಕಾಯಿಲೆಗಳಿಗೆ ರಾಮಬಾಣ ಎಂದೇ ಪ್ರಸಿದ್ಧಿಯಾಗಿದೆ. ಫೈಬರ್, ವಿಟಮಿನ್ ಸಿ ಯಥೇಚ್ಛವಾಗಿದೆ. ಡೆಂಗ್ಯೂ ಜ್ವರಕ್ಕೂ ಬಹಳಷ್ಟು ಜನರು ಇದೇ ಡ್ರ್ಯಾಗನ್ ಹಣ್ಣನ್ನು ಬಳಸುತ್ತಾರೆ. ಭಟ್ಕಳದ ಅನಿಲ್ ತೋಟದ ಡ್ರ್ಯಾಗನ್ ಹಣ್ಣು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪ್ರತಿ `ಕೆಜಿ ಡ್ರಾಗನ್ ಹಣ್ಣಿಗೆ ರು.150-200ರಂತೆ ಮಾರಾಟವಾಗುತ್ತಿದೆ. ಈಗಾಗಲೇ | ಕ್ವಿಂಟಾಲ್ 75ಕೆಜಿ ಆಗುವಷ್ಟು ಹಣ್ಣನ್ನು ಅನಿಲ್ ಮಾರಿದ್ದಾರೆ. ತಮ್ಮ ಪರಿಶ್ರಮಕ್ಕೆ ಸಿಗುತ್ತಿರುವ ಬೆಲೆ ಕಂಡು ಈಗಾಗಲೇ ಸಾಲ ಮಾಡಿ ರೂ.15 ಲಕ್ಷಕ್ಕೂ ಹೆಚ್ಚು ಹಣವನ್ನು ಡ್ರ್ಯಾಗನ್ ನಿರ್ಮಾಣಕ್ಕೆ ಸುರಿದಿರುವ ಅನಿಲ್ ಮುಖದಲ್ಲಿ ಮಂದಹಾಸ ಮೂಡಿದೆ. ಡ್ರ್ಯಾಗನ್ ನೆಟ್ಟ ಜಾಗದಲ್ಲಿ ಅಕೇಶಿಯಾ ಬೆಳೆದುಕೊಂಡಿತ್ತು. ಬರಡು ನೆಲದಲ್ಲಿ ಬೆಳೆ
ತೆಗೆಯಬಹುದು ಎಂದು ಹುಡುಕಾಡಿ ಕೊನೆಗೆ ಡ್ರ್ಯಾಗನ್ ಬೆಳೆದಿದ್ದೇನೆ. ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿರುವುದಕ್ಕೆ ಸಂತಸ ತಂದಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.
ಮುಂದೆ ಡ್ರ್ಯಾಗನ್ ಗಿಡ, ಬೆಳೆಯನ್ನು ಕಾಪಾಡಿಕೊಂಡು, ಅಕ್ಕಪಕ್ಕದ ಖಾಲಿ ಜಮೀನಿಗೂ ವಿಸ್ತರಿಸುವ ಕನಸು ಅನಿಲ್ ನಾಯ್ಕರದ್ದಾಗಿದೆ. ವಿಶೇಷ ಎಂದರೆ ಇದೇ ಡ್ರ್ಯಾಗನ್ ಬೆಳೆಯ ನಡುವೆ ಹೊಸ ತಳಿಯ ಸೇಬು ನೆಟ್ಟು ಫಲವನ್ನು ಎದುರು ನೋಡುತ್ತಿದ್ದಾರೆ. ನೆಟ್ಟ ಗಿಡದಲ್ಲಿ ಚಿಕ್ಕ ಸೇಬು ಚಿಗುರೊಡೆದಿರುವುದನ್ನು ಕಂಡು ಆ ಬೆಳೆಯ ಸಾಧ್ಯತೆಯ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
ಒಟ್ಟಿನಲ್ಲಿ ಇಂತದೊಂದು ವಿದೇಶಿ ಹಣ್ಣಿನ ಬೆಳೆಯನ್ನು ಉತ್ತರ ಕನ್ನಡ ಭಟ್ಕಳದ ಮಣ್ಣಿನಲ್ಲೂ ಬೆಳೆಯಬಹುದು ಎಂದು ತೋರಿಸಿಕೊಟ್ಟ ಈ ರೈತನ ಸಾಧನೆಗೆ ಕೃಷಿ ವಿಜ್ಞಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ