ಬೆಂಗಳೂರು: ರೈಲು ಪ್ರಯಾಣವನ್ನು ಅನುಕೂಲಕರ ಮತ್ತು ಸುಖದಾಯಕವನ್ನಾಗಿ ಮಾಡಲು ಹಾಗೂ ವೆಚ್ಚ ಹಂಚಿಕೆಯ 9 ರೈಲು ಯೋಜನೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲು ಖನಿಜ ಭವನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಚಿವ ಎಂ.ಬಿ.ಪಾಟೀಲ್ ಸಭೆ ನಡೆಸಿದರು.
ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗಳಿಗೆ ರೈಲು ಪ್ರಯಾಣಕ್ಕೆ ಈಗ ಸುಮಾರು 14 ಗಂಟೆಗಳ ಕಾಲ ಹಿಡಿಸುತ್ತಿದ್ದು, ಇದನ್ನು 10 ಗಂಟೆಗಳಿಗೆ ಇಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಿಂದಾಗಿ, ವಾಯವ್ಯ ಕರ್ನಾಟಕದ ಜನರು ಬೆಂಗಳೂರಿಗೆ ಬಂದುಹೋಗಲು ಅನುಕೂಲವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: "ನಮ್ಮದೇ ಗ್ಯಾರಂಟಿ ಸ್ಕೀಂಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ"-ಸಿಎಂ ಸಿದ್ದರಾಮಯ್ಯ
ಈ ಕ್ರಮಗಳ ಜೊತೆಗೆ ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆಗಳಿಗೆ ವಿಶೇಷ ರೈಲುಗಳನ್ನು ಓಡಿಸಬೇಕಾದ ಅಗತ್ಯವಿದೆ. ಮಿಗಿಲಾಗಿ, ವಿದ್ಯುದೀಕರಣ ಕಾಮಗಾರಿ ಮುಗಿದರೆ ವಿಜಯಪುರ, ಬಾಗಲಕೋಟೆಗಳಿಗೆ `ವಂದೇ ಭಾರತ್’ ಎಕ್ಸಪ್ರೆಸ್ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಮಂಡಳಿಯನ್ನು ಕೋರಲಾಗುವುದು ಎಂದು ಹೇಳಿದರು.
ವೆಚ್ಚ ಹಂಚಿಕೆ ಯೋಜನೆಗಳಿಗೆ ಗಡುವು
ರಾಜ್ಯದಲ್ಲಿ ರೈಲ್ವೆಯೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ 9 ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ಇವು ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ವೆಚ್ಚ ಮಿತಿ ಮೀರುತ್ತಿದೆ. ಆದ್ದರಿಂದ ಇವುಗಳ ವೆಚ್ಚ ಹೆಚ್ಚಾಗದಂತೆ ನೋಡಿಕೊಂಡು, ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಎಂ.ಬಿ.ಪಾಟೀಲ್ ಸೂಚಿಸಿದರು.
ಇದನ್ನೂ ಓದಿ: ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥ : ದಾವಣೆಗೆರೆಯ ಮಲೇಬೆನ್ನೂರಿನಲ್ಲಿ ಘಟನೆ
ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್ ಮಂಜುಳಾ, ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಎಂಡಿ ಶ್ರೀ ಸತೀಶ, ನೈರುತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ, ಶ್ರೀ ರಾಮಗೋಪಾಲ್, ರೈಲ್ವೆಯ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಶ್ರೀ ಮೂರ್ತಿ ರಾಜು, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರರಾದ ಶ್ರೀ ಅರವಿಂದ ಗಲಗಲಿ ಮೊದಲಾದವರು ಉಪಸ್ಥಿತರಿದ್ದರು.