ಬೆಂಗಳೂರು : ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಇತರ ರಾಜಕೀಯ ಪಕ್ಷಗಳಿಗಿಂತ ದುಷ್ಟ ಪಕ್ಷ ಎಂದು ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 'ರಾಜಕೀಯ ಭ್ರಷ್ಟಾಚಾರ ಮತ್ತು ಪ್ರಜಾಪ್ರಭುತ್ವಕ್ಕಿರುವ ಅಪಾಯಗಳು' ವಿಷಯದ ಕುರಿತು ಸ್ವರಾಜ್ ಇಂಡಿಯಾ ಮತ್ತು ಜನಸಂಗ್ರಾಮ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್ದಿಎ ಸರ್ಕಾರ ಭ್ರಷ್ಟ ಸರ್ಕಾರ ಮಾತ್ರವಲ್ಲ, ನ್ಯಾಯಾಂಗ ಸೇರಿದಂತೆ ಎಲ್ಲಾ ಪ್ರಜಾಪ್ರಭುತ್ವ ಸಂಸ್ಥೆಗಳನ್ನೂ ಕೆಡವಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಮುಂದುವರೆದು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ಆಪ್ತರಾದವರನ್ನು ಸಿಬಿಐ, ಸಿವಿಸಿ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲೂ ನೇಮಕ ಮಾಡಿಕೊಂಡಿದ್ದು, ನ್ಯಾಯಾಂಗವನ್ನೇ ಸರ್ಕಾರ ಬ್ಲಾಕ್'ಮೇಲ್ ಮಾಡುತ್ತಿದೆ ಎಂದು ಆರೋಪಿಸಿದರು.
ಹಿಂದಿನ ನ್ಯಾಯಾಲಯಗಳಿಂದ ದೋಷಾರೋಪಣೆಗೊಳಗಾದ ಭ್ರಷ್ಟ ನಾಯಕರಿಗೆ ಬಜೆಪಿ ಮತ್ತು ಕಾಂಗ್ರೆಸ್ ಆಶ್ರಯ ನೀಡಿವೆ. ಬಿಜೆಪಿಯ ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಸಹಾ ಭ್ರಷ್ಟಾಚಾರ ಆರೋಪದಲ್ಲಿ ಜೈಲುವಾಸ ಅನುಭವಿಸಿದ್ದಾರೆ. ಹಾಗೇ ಕಾಂಗ್ರೆಸ್'ನ ಡಿ.ಕೆ.ಶಿವಕುಮಾರ್ ಕೂಡ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದರು.
ಮುಂಬರಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕನಿಷ್ಠ 10 ಅಭ್ಯರ್ಥಿಗಳನ್ನು ಸ್ವರಾಜ್ ಇಂಡಿಯಾ ಕಣಕ್ಕಿಳಿಸಲಿದೆ. ಮುಂದಿನವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಪ್ರಶಾಂತ್ ಭೂಷಣ್ ಹೇಳಿದರು.