ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು

ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ಪಕ್ಷದ ಸಾಧನೆಗಳ ಪ್ರಚಾರಕ್ಕಾಗಿ ನೂರಾರು ಕೋಟಿ ರೂ.ಗಳ ಸಾರ್ವಜನಿಕರ ಹಣವನ್ನು ಖರ್ಚು ಮಾಡುತ್ತಿದೆ ಎಂದು ಎಸಿಬಿಯಲ್ಲಿ ಇಂದು ದೂರು ದಾಖಲಾಗಿದೆ.

Last Updated : Jan 1, 2018, 04:19 PM IST
  • ಹೊಸ ವರ್ಷದ ಮೊದಲ ದಿನವೇ ಸಿದ್ಧರಾಮಯ್ಯ ಸರ್ಕಾರ ಇಕ್ಕಟ್ಟಿಗೆ.
  • ಕಾಂಗ್ರೆಸ್ ಸರ್ಕಾರವು ತನ್ನ ಪಕ್ಷದ ಸಾಧನೆಗಳ ಪ್ರಚಾರಕ್ಕಾಗಿ ನೂರಾರು ಕೋಟಿ ರೂ.ಗಳ ಸಾರ್ವಜನಿಕರ ಹಣವನ್ನು ಖರ್ಚು ಮಾಡುತ್ತಿದೆ ಎಂದು ಎಸಿಬಿಯಲ್ಲಿ ಇಂದು ದೂರು ದಾಖಲು.
  • ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿಯಿಂದ ದೂರು ದಾಖಲು.
  • ಸರ್ಕಾರ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆಗಳ ಪ್ರಚಾರಕ್ಕಾಗಿ ಬರೋಬ್ಬರಿ 129 ಕೋಟಿ ರೂ. ಸಾರ್ವಜನಿಕ ತೆರಿಗೆ ಹಣದ ದುರುಪಯೋಗ ಆರೋಪ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿಯಲ್ಲಿ ದೂರು ದಾಖಲು title=

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ಪಕ್ಷದ ಸಾಧನೆಗಳ ಪ್ರಚಾರಕ್ಕಾಗಿ ನೂರಾರು ಕೋಟಿ ರೂ.ಗಳ ಸಾರ್ವಜನಿಕರ ಹಣವನ್ನು ಖರ್ಚು ಮಾಡುತ್ತಿದೆ ಎಂದು ಎಸಿಬಿಯಲ್ಲಿ ಇಂದು ದೂರು ದಾಖಲಾಗಿದೆ. ಈ ಮೂಲಕ ಹೊಸ ವರ್ಷದ ಮೊದಲ ದಿನವೇ ಸಿದ್ಧರಾಮಯ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. 

ಈ ಕುರಿತು ಎಸಿಬಿಗೆ ದೂರು ನೀಡಿರುವ ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಉಪಾಧ್ಯಕ್ಷ ಗಣೇಶ್ ಸಿಂಗ್ ``ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರವು ತನ್ನ ಸಾಧನೆಗಳನ್ನು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಚಾರ ಮಾಡುವ ಸಲುವಾಗಿ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಒಟ್ಟು 129,46,62,311 (ಒಂದು ನೂರಾ ಇಪ್ಪತ್ತೊಂಬತ್ತು ಕೋಟಿ ನಲವತ್ತಾರು ಲಕ್ಷದ ಅರವತ್ತೆರಡು ಸಾವಿರದ ಮುನ್ನೂರ ಹನ್ನೊಂದು)ರೂ.ಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ಅನಾವಶ್ಯಕವಾಗಿ ವೆಚ್ಚ ಮಾಡಿದೆ'' ಎಂದು ಆರೋಪಿಸಿ ಎಸಿಬಿ ಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದೆ. 

ಪಕ್ಷದ ಸರ್ಕಾರವು ಅನುಷ್ಠಾನಗೊಳಿಸಿರುವ ಯೋಜನೆಗಳ ಪ್ರಚಾರ ಕಾರ್ಯಕ್ಕೆ ತಗಲುವ ವೆಚ್ಚವನ್ನು ಪಕ್ಷದ ನಿಧಿಯಿಂದಲೇ ಭರಿಸಬೇಕಾಗಿರುತ್ತದೆಯೇ ಹೊರತು ಸಾರ್ವಜನಿಕರ ಹಣವನ್ನು ಅವರ ಪಕ್ಷದ ಸಾಧನೆಗಳನ್ನು ತೋರಿಸುವ ಪ್ರಚಾರ ಕಾರ್ಯಗಳಿಗೆ ಬಳಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ಕಾಂಗ್ರೆಸ್ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಕ್ಕೆಂದು ಸರ್ಕಾರದ ಖಜಾನೆಯಿಂದ ಬಳಸಿಕೊಂಡಿರುವ ಹಣದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ ಎಂದು ದೂರಿದ್ದಾರೆ.   

ಅಷ್ಟೇ ಅಲ್ಲದೆ, ಸಮಿತಿಯು ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧವೂ ದೂರು ಸಲ್ಲಿಸಿದೆ.

Trending News