ಅಶಕ್ತರ ನೋವಿಗೆ ಧ್ವನಿಯಾದ ಮುಖ್ಯಮಂತ್ರಿ

ಅರ್ಜಿ ಹಿಡಿದು ಕಾದು ಕುಳಿತಿದ್ದ ಹಿರಿಯ ನಾಗರೀಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಹಲವು ನಾಗರೀಕರಿಂದ ಮುಖ್ಯಮಂತ್ರಿಗಳು ನೇರವಾಗಿ ಅಹವಾಲು ಆಲಿಸಿದರು.

Last Updated : Oct 15, 2018, 09:28 AM IST
ಅಶಕ್ತರ ನೋವಿಗೆ ಧ್ವನಿಯಾದ ಮುಖ್ಯಮಂತ್ರಿ title=

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಾನುವಾರ ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಹಲವು ನಾಗರೀಕರ ಅಹವಾಲನ್ನು ಆಲಿಸಿ, ಅವರ ನೋವುಗಳಿಗೆ ಪರಿಹಾರ ಒದಗಿಸಿದರು.

ಕದ್ರಿ ಶಿವಭಾಗ್ ನಲ್ಲಿ ನಡೆದ ಶಾಸಕ ಭೋಜೇಗೌಡ ಅವರ ಕಚೇರಿ ಉದ್ಘಾಟನೆ ಬಳಿಕ ಭಾಗವಹಿಸಿ ಹೊರಹೋಗುವಾಗ ತನಗಾಗಿ ಅರ್ಜಿ ಹಿಡಿದು ಕಾದು ಕುಳಿತಿದ್ದ ಹಿರಿಯ ನಾಗರೀಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಹಲವು ನಾಗರೀಕರಿಂದ ಮುಖ್ಯಮಂತ್ರಿಗಳು ನೇರವಾಗಿ ಅಹವಾಲು ಆಲಿಸಿದರು. ಮುಖ್ಯಮಂತ್ರಿಗಳು ನೇರವಾಗಿ ಸಾರ್ವಜನಿಕರನ್ನು ಭೇಟಿಯಾಗಿ, ಸಾವಧಾನದಿಂದಲೇ ಅಹವಾಲು ಆಲಿಸಿದರು.

ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬಹುದಾದ ಹಲವು ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇನ್ನೂ ಕೆಲವು ನಾಗರೀಕರಿಗೆ ಅವರ ಸಮಸ್ಯೆಗಳಿಗೆ ಬೆಂಗಳೂರಿಗೆ ಬಂದು ತನ್ನನ್ನು ಭೇಟಿಯಾಗುವಂತೆ ಸೂಚಿಸಿದರು.

ಪ್ರಸ್ತುತ ಮಂಗಳೂರು ಆಕಾಶಭವನದಲ್ಲಿ ನೆಲೆಸಿರುವ ಕೊಪ್ಪಳ ಜಿಲ್ಲೆಯ ಮೂಲದ ಪುಷ್ಪಾ ಎಂಬವರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಮಗಳು  ಸುಷ್ಮಿತಾಳ ಚಿಕಿತ್ಸೆಗೆ ಸಾಕಷ್ಟು ವೆಚ್ಚವಿದ್ದು, ನೆರವು ನೀಡಲು ಸಿಎಂಗೆ ಮನವಿ ಸಲ್ಲಿಸಿದರು. ಪ್ರಸಕ್ತ ಬೆಸೆಂಟ್ ಕಾಲೇಜ್‌ನಲ್ಲಿ ಪಿಯುಸಿ ಕಲಿಯುತ್ತಿರುವ ಸುಷ್ಮಿತಾ  ಕ್ರೀಡೆಯಲ್ಲಿ ಸಾಕಷ್ಟು ಬಹುಮಾನ ಪಡೆದಿದ್ದು, ಅದರ ಸರ್ಟಿಫಿಕೇಟ್ ಗಳನ್ನು ತಾಯಿ ಸಿಎಂಗೆ ತೋರಿಸಿದರು‌‌. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಕೂಡಲೇ ಸುಷ್ಮಿತಾಳ ಚಿಕಿತ್ಸೆ ವೆಚ್ಚದ ಅಂದಾಜು ಪಟ್ಟಿ ಪಡೆದು ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಬಂಟ್ವಾಳ ತಾಲೂಕಿನ ಮೇರೆಮಜಲು ಗ್ರಾಮದ ವಿಜಯಾ ಎಂಬ ಮಹಿಳೆಯು, ತನ್ನ ವಾಸದ ಮನೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಕೆಡವಿ ಹಾಕಿದ್ದು, ತನಗೆ ಯಾವುದೇ ನಿವೇಶನ ನೀಡದೆ ಬೀದಿಗೆ ಬಿದ್ದಿರುವುದಾಗಿ ಮುಖ್ಯಮಂತ್ರಿಗಳಿಗೆ ಮೊರೆ ಇಟ್ಟರು. ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳಲು ಸಿಎಂ ಅಧಿಕಾರಿಗಳಿಗೆ ನಿರ್ದೇಶಿಸಿದರು.

Trending News