ಮಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಮತ್ತು ಮನೆ ದುರಸ್ತಿಗೆ 1 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕಾವು ಪರಿಹಾರ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅತಿವೃಷ್ಠಿಯಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು 5 ಲಕ್ಷ ರೂ. ಹಾಗೂ ಮನೆ ದುರಸ್ತಿ ಕಾರ್ಯ ಕೈಗೊಳ್ಳಲು 1 ಲಕ್ಷ ರೂ. ನೆರವು ನೀಡಲಾಗುವುದು ಎಂದು ಘೋಷಿಸಿದರು.
ಪ್ರವಾಹ ಸಂತ್ರಸ್ತರಿಗೆ ಮನೆ ರಿಪೇರಿ ಮಾಡಲು ಒಂದು ಲಕ್ಷ ರೂ. ನೆರವು ನೀಡುವುದಾಗಿ ಮುಖ್ಯ ಮಂತ್ರಿ @BSYBJP ಅವರು ಇಂದು ಪ್ರಕಟಿಸಿದರು.
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಕುಕ್ಕಾವು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಪರಿಹಾರವನ್ನು ಘೋಷಿಸಿದರು. https://t.co/MKZwUibgnX pic.twitter.com/JF4p3UrDpe— CM of Karnataka (@CMofKarnataka) August 12, 2019
ಮುಂದುವರೆದು ಮಾತನಾಡುತ್ತಾ, ಈಗಾಗಲೇ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ, ಹೊಸ ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆಗಳ ವ್ಯವಸ್ಥೆ ಮಾಡಿಕೊಡಬೇಕಿದೆ. ಅದಕ್ಕಾಗಿ ಸಂತ್ರಸ್ತ ಕುಟುಂಬಗಳಿಗೆ ಪ್ರತಿ ತಿಂಗಳು 5 ಸಾವಿರ ರೂ. ಪರಿಹಾರ ನೀಡಲಾಗುವುದು. ಮನೆ ಕಟ್ಟುವವರೆಗೆ ಅವರು ಬಾಡಿಗೆ ಮನೆ ಅಥವಾ ಸಂಬಂಧಿಕರ ಮನೆಯಲ್ಲಿ ಇರಬಹುದು ಎಂದು ಸಿಎಂ ತಿಳಿಸಿದರು.
ಬೆಳೆ ನಾಶ ಸೇರಿದಂತೆ ಪ್ರವಾಹದಿಂದಾಗಿ ನೆಲಕ್ಕುರುಳಿದ ಅಡಿಕೆ ಮರ, ತೆಂಗಿನ ಮರಗಳನ್ನೂ ಲೆಕ್ಕಹಾಕಿ ಪರಿಹಾರ ಒದಗಿಸಲಾಗುವುದು. ಅಲ್ಲದೆ, ದಾಖಲೆಯಿಲ್ಲದ, ಜಾಗಗಳಿಲ್ಲದ ಕುಟುಂಬಗಳಿಗೆ 30x40, 30x50 ಅಳತೆಯ ನಿವೇಶನಗಳನ್ನು ನೀಡಲಾಗುವುದು. ಅಷ್ಟೇ ಅಲ್ಲದೆ, ನೆರೆ ಸಂತ್ರಸ್ತ ಕುಟುಂಬಗಳಿಗೆ ತಲಾ 10, 000 ರೂ. ತಾತ್ಕಾಲಿಕ ಪರಿಹಾರ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಅಂತೆಯೇ ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್.ಶಶಿಕಾಂತ್ ಸೆಂಥಿಲ್ ಅವರಿಗೆ ಸೂಚನೆ ನೀಡಿದರು.
ಪ್ರವಾಹ ಪೀಡಿತ ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತಬಾಗಿಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ವೀಕ್ಷಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಿಎಂಗೆ ಸಾಥ್ ನೀಡಿದರು.@NDRFHQ #KarnatakaFloods2019 pic.twitter.com/TUgCVLX0rZ— CM of Karnataka (@CMofKarnataka) August 12, 2019
ರಾಜ್ಯದ 86 ತಾಲ್ಲೂಕುಗಳ 2964 ಹಳ್ಳಿಗಳು ನೆರೆಯಿಂದ ಜಲಾವೃತಗೊಂಡಿದ್ದು, 81,887 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 1181 ಪರಿಹಾರ ಕೇಂದ್ರಗಳನ್ನು ತೆರೆದು 3,32,629 ಜನರಿಗೆ ಆಶ್ರಯ ನೀಡಲಾಗಿದೆ. ಈಗಾಗಲೇ ಪರಿಹಾರ ಕಾರ್ಯಗಳಿಗಾಗಿ 3 ಸಾವಿರ ಕೋಟಿ ರೂ. ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.