ಸಚಿವ ಸಂಪುಟ ಮೇಜರ್ ಸರ್ಜರಿಗೆ ಸಿಎಂ ತಯಾರಿ: ನಾಲ್ವರು ಹಾಲಿ ಸಚಿವರಿಗೆ ಗೆಟ್ ಪಾಸ್..!?

ಸಿಎಂ ಬಿಎಸ್ ವೈ ಸಂಪುಟಕ್ಕೆ ಮೇಜರ್ ಸರ್ಜರಿ

Last Updated : Nov 11, 2020, 03:57 PM IST
  • ಸಿಎಂ ಬಿಎಸ್ ವೈ ಸಂಪುಟಕ್ಕೆ ಮೇಜರ್ ಸರ್ಜರಿ
  • ಸರ್ಜರಿಯಲ್ಲಿ ಹಾಲಿ ನಾಲ್ವರನ್ನು ಕೈಬಿಟ್ಟು ಕೆಲವು ಸಚಿವರ ಖಾತೆ ಬದಲಾವಣೆ
  • ಪ್ರಾದೇಶಿಕ ಹಾಗೂ ಜಾತಿ ಸಮತೋಲನ ಕಾಪಾಡಲು ಕೆಲವು ಸಚಿವರಿಗೆ ಸಂಪುಟದಿಂದ ಕೊಕ್
ಸಚಿವ ಸಂಪುಟ ಮೇಜರ್ ಸರ್ಜರಿಗೆ ಸಿಎಂ ತಯಾರಿ: ನಾಲ್ವರು ಹಾಲಿ ಸಚಿವರಿಗೆ ಗೆಟ್ ಪಾಸ್..!? title=
Image Courtesy zee news

ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ, ಇದೀಗ ಸಂಪುಟ ಪುನಾರಚನೆ ಹಾಗೂ ವಿಸ್ತರಣೆ ಎರಡು ಏಕಕಾಲದಲ್ಲಿ ನಡೆಯಲಿದೆ. ಹೀಗಾಗಿ ಈ ಬಾರಿ ಸಿಎಂ ಬಿಎಸ್ ವೈ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಇದೇ 18ರಂದು ಸಂಪುಟ ಪುನಾರಚನೆ ಹಾಗೂ ವಿಸ್ತರಣೆಯಾಗಲಿದೆ. ಈ ಸರ್ಜರಿಯಲ್ಲಿ ಹಾಲಿ ನಾಲ್ವರನ್ನು ಕೈಬಿಟ್ಟು ಕೆಲವು ಸಚಿವರ ಖಾತೆಗಳು ಬದಲಾವಣೆಯಾಗುವ ಸಾಧ್ಯತೆ ಇದೆ.

ಈ ಬಾರಿ ಸಂಪುಟದಲ್ಲಿ ಹೊಸಬರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ಪಾಳೆಯದಲ್ಲಿ ಕೇಳಿಬರುತ್ತಿವೆ. ದೀಪಾವಳಿ ನಂತರ ರಾಜ್ಯ ಮಂತ್ರಿ ಮಂಡಲದಲ್ಲಿ ಭಾರೀ ಬದಲಾವಣೆ ಸಾಧ್ಯತೆ ಇದ್ದು, ಕೆಲವು ಹಾಲಿ ಸಚಿವರಿಗೆ ಕೊಕ್ ನೀಡುವುದು ಬಹುತೇಕ ಖಚಿತವಾಗಿದೆ. ಬಿಹಾರ ಚುನಾವಣೆಯಲ್ಲಿ ಎನ್‍ಡಿಎ ಮತ್ತೆ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅಲ್ಲಿ ಸರ್ಕಾರ ರಚನೆಯತ್ತ ಬಿಜೆಪಿ ವರಿಷ್ಠರು ಗಮನ ಹರಿಸಿದ್ದಾರೆ.

ಹೀಗಾಗಿ ಮೂರು ದಿನಗಳ ನಂತರ ನವದೆಹಲಿಗೆ ತೆರಳಿರುವ ಸಿಎಂ ಯಡಿಯೂರಪ್ಪ ಅವರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಸಂಪುಟ ಪುನಾರಚನೆ ಹಾಗೂ ವಿಸ್ತರಣೆಗೆ ವರಿಷ್ಠರು ಹಸಿರು ನಿಶಾನೆ ತೋರಿದರೆ, ನ.18ರಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸಚಿವರಾದ ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಸಿ.ಸಿ.ಪಾಟೀಲ್, ಕೋಟಾ ಶ್ರೀನಿವಾಸಪೂಜಾರಿ ಸೇರಿದಂತೆ 3 ರಿಂದ ನಾಲ್ಕು ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಖಾಲಿ ಇರುವ ಏಳು ಸ್ಥಾನ ಸೇರಿ 10 ಮಂದಿ ಹೊಸಬರಿಗೆ ಅವಕಾಶ ಕೊಡಲಾಗುತ್ತಿದೆ. ಅಲ್ಲದೆ, ಎರಡು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರಾದೇಶಿಕ ಹಾಗೂ ಜಾತಿ ಸಮತೋಲನ ಕಾಪಾಡಲು ಕೆಲವು ಸಚಿವರಿಗೆ ಸಂಪುಟದಿಂದ ಕೊಕ್ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಳಗಾವಿಯಿಂದ ಒಬ್ಬರು, ವೀರಶೈವ-ಲಿಂಗಾಯಿತ ಸಮುದಾಯಕ್ಕೆ ಸೇರಿದ ಇಬ್ಬರು ನಾಯಕರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ.

ಈವರೆಗೆ ತಮ್ಮ ಕೆಲಸದಲ್ಲಿ ಕಳಪೆ ನಿರ್ವಹಣೆ ಮಾಡಿರುವ ಸಚಿವರಿಗೆ ಕೊಕ್ ನೀಡಲಿದ್ದು, ಇನ್ನೂ ಕೆಲವು ಸಚಿವರ ಕಾರ್ಯಕ್ಷಮತೆ ಆಧರಿಸಿ ಖಾತೆ ಬದಲಾವಣೆ ಮಾಡಲಾಗುವುದು ಎಂದೂ ಸಹ ಬಿಜೆಪಿ ಮೂಲಗಳು ಹೇಳಿವೆ. ಹೊಸಬರು ಮತ್ತು ಕಠಿಣ ಪರಿಶ್ರಮ ಹಾಕುವವರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ವರಿಷ್ಠರು ಈ ಹಿಂದೆಯೇ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದರು. ಆದರೆ, ಹಿರಿಯರನ್ನು ಕೈಬಿಡುವ ವಿಚಾರದಲ್ಲಿ ಯಡಿಯೂರಪ್ಪ ಕೊಂಚ ಹಿಂದೇಟು ಹಾಕುತ್ತಿದ್ದಾರೆ.

 

 

Trending News