ಮಾಜಿ ಸಿಎಂ- ಹಾಲಿ ಸಿಎಂ ನಡುವೆ ಯೋಜನೆಗಳ ಕಿತ್ತಾಟ

ಕೆಸರೆರಚಾಟದಲ್ಲಿ ನಿರತರಾಗಿರುವ ರಾಜಕೀಯ ನಾಯಕರು.

Last Updated : Dec 17, 2017, 09:51 AM IST
  • ಭಾಗ್ಯಲಕ್ಷ್ಮಿ ಯಂತಹ ಒಂದು ಯೋಜನೆಯನ್ನು ಕಾಂಗ್ರೇಸ್ ನೀಡಿಲ್ಲ- ಬಿಎಸ್ವೈ
  • ಹರಕಲು ಸೀರೆ ಮತ್ತು ಮುರುಕಲು ಸೈಕಲ್ ಕೊಟ್ಟಿದ್ದೇ ಯಡಿಯೂರಪ್ಪ ಅವರ ಸಾಧನೆ- ಸಿದ್ದರಾಮಯ್ಯ
ಮಾಜಿ ಸಿಎಂ- ಹಾಲಿ ಸಿಎಂ ನಡುವೆ ಯೋಜನೆಗಳ ಕಿತ್ತಾಟ title=

ಇನ್ನೇನು ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ತೊಡಗಿವೆ. ರಾಷ್ಟ್ರೀಯ ಪಕ್ಷಗಳ ನಾಯಕರು ಒಬ್ಬರು ಮತ್ತೊಬ್ಬರ ಮೇಲೆ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ಅದಕ್ಕೆ ನಮ್ಮ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಲಿ ಅಥವಾ ಹಾಲಿ ಸಿಎಂ ಸಿದ್ದರಾಮಯ್ಯ ಅವರಾಗಲಿ ಹೊರತಾಗಿಲ್ಲ. 

ಸ್ವಾತಂತ್ರ ಬಂದು 70 ವರ್ಷಗಳಾದರೂ ಭಾಗ್ಯಲಕ್ಷ್ಮಿ ಯಂತಹ ಒಂದು ಯೋಜನೆಯನ್ನು ಕಾಂಗ್ರೇಸ್ ನೀಡಿಲ್ಲ.  ನಾವು ನೀಡಿರುವ ಯೋಜನೆಯನ್ನು ಸಿದ್ದರಾಮಯ್ಯ ಲೇವಡಿ ಮಾಡುತ್ತಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ವಾಗ್ದಾಳಿ ಕೇಳಿ ಇನ್ನು ಸಿಎಂ ಸುಮ್ಮನಿರುತ್ತಾರಾ? ಅದಕ್ಕೆ ಸಿಎಂ ಸಹ ಪ್ರತಿದಾಳಿ ನಡೆಸುತ್ತಾ, ಹರಕಲು ಸೀರೆ ಮತ್ತು ಮುರುಕಲು ಸೈಕಲ್ ಕೊಟ್ಟಿದ್ದೇ ಯಡಿಯೂರಪ್ಪ ಅವರ ಸಾಧನೆ. ತಮ್ಮ ಪ್ರಚಾರ ಭಾಷಣಗಳಲ್ಲಿ ಅವರು ಹೇಳುತ್ತಿರುವುದು ಆ ಒಂದನ್ನೇ ಎಂದು ಸಿದ್ದರಾಮಯ್ಯ ಅವರು ಮತ್ತೆ ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯನವರ ಸರ್ಕಾರ 5 ವರ್ಷದಲ್ಲಿ ರು. 50 ಸಾವಿರನ್ನು ಕೃಷ್ಣಾ ಯೋಜನೆಗೆ ಖರ್ಚು ಮಾಡುತ್ತೇನೆ ಎಂದು ಹೇಳಿ ಕೇವಲ 7 ಸಾವಿರ ಕೊಟಿ ರು. ಖರ್ಚು ಮಾಡಿ ಯೋಜನೆ ಅಪೂರ್ಣ ಮಾಡಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ರು.1 ಲಕ್ಷ ಕೋಟಿಯನ್ನು ಹೂಡಿಕೆ ಮುಖಾಂತರವಾಗಿಯಾದರೂ ತಂದು ಕೃಷ್ಣಾ ಯೋಜನೆ ಪೂರ್ಣ ಮಾಡಿ ಕೊಡುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಸಿಎಂ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗೆ ಕೇಂದ್ರದಿಂದ ಒಂದು ಲಕ್ಷ ಕೋಟಿ ತರುವುದಾಗಿ ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಇಲ್ಲಿ ಅವರದ್ದೇ ಸರ್ಕಾರ ಇದ್ದಾಗ ಐದು ವರ್ಷದಲ್ಲಿ ಖರ್ಚು ಮಾಡಿದ್ದು ಕೇವಲ 18 ಸಾವಿರ ಕೋಟಿ ರೂ. ಆದರೆ ನಾವು ಪ್ರತಿ ವರ್ಷ ಹತ್ತು ಸಾವಿರ ಕೋಟಿ ರೂ.ಗಳನ್ನು ವಿವಿಧ ನೀರಾವರಿ ಯೋಜನೆಗಳಿಗೆ ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ತ್ಯಾಗ ಮತ್ತು ಬಲಿದಾನ ಹಿನ್ನೆಲೆ ಇರುವ ಪಕ್ಷ. ಆದರೆ ಬಿಜೆಪಿಯವರು ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳುತ್ತಿದ್ದಾರೆ. ಅದು ಅವರ ಭ್ರಮೆ ಮತ್ತು ಕನಸು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದವರು. ಪೂರ್ತಿ ಸತ್ಯ ಹೇಳುವುದು ಬೇಡ, ಸತ್ಯಕ್ಕೆ ಹತ್ತಿರವಾದ ವಿಚಾರಗಳನ್ನಾದರೂ ಜನರಿಗೆ ತಿಳಿಸಬೇಕಲ್ಲವೇ ? ಆದರೆ ಅವರು ಹೋದ ಕಡೆ ಬರೀ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಸತ್ಯದ ಪರಿಚಯವೇ ಇಲ್ಲ. ಹೀಗಾಗಿ ಬಿಜೆಪಿ ಎಂದರೆ ಬಂಡಲ್ ಪಾರ್ಟಿ ಎನ್ನುವಂತಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ದಾಳಿ-ಪ್ರತಿದಾಳಿಗಳು ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಯಾರಿಗೂ ತಿಳಿದಿಲ್ಲ. ಯಾವ ಯಾವ ಸರ್ಕಾರದ ಯೋಜನೆಗಳು ಜನರಿಗೆ ಎಷ್ಟರ ಮಟ್ಟಿಗೆ ತಲುಪಿವೆ ಎಂಬುದು ಫಲಾನುಭವಿಗಳಷ್ಟೇ ಹೇಳಬೇಕಿದೆ. ಈ ಯೋಜನೆಗಳ ಕಿತ್ತಾಟದಿಂದ ಯಾವ ಪಕ್ಷಕ್ಕೆ ಲಾಭ ಸಿಗಲಿದೆ? ಇವೆಲ್ಲದಕ್ಕೂ ಉತ್ತರ ದೊರೆಯುವುದು 2018ರ ವಿಧಾನಸಭಾ ಚುನಾವಣೆಯ ನಂತರ. ಅಲ್ಲಿಯವರೆಗೂ ಈ ರೀತಿಯ ಕಿತ್ತಾಟ, ವಾಗ್ದಾಳಿ, ಆರೋಪಗಳನ್ನು ಎಲ್ಲಾ ಪಕ್ಷಗಳ ನಾಯಕರು ಮಾಡುತ್ತಲೇ ಇರುತ್ತಾರೆ. ಯಾರನ್ನು ನಂಬಬೇಕು, ಯಾರು ಜನಪರ ಕೆಲಸಗಳನ್ನು ಮಾಡಿದ್ದಾರೆ, ಯಾವ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿ ಪಡಿಸಲಿದೆ ಎಂಬುದನ್ನು ಚುನಾವಣೆಯಲ್ಲಿ ಜನತೆ ನಿರ್ಧರಿಸಲಿದ್ದಾರೆ.

Trending News