ಎತ್ತಿನಹೊಳೆ ಯೋಜನೆ: ಹತ್ತು ವರ್ಷಗಳ ಭಗೀರಥ ಪ್ರಯತ್ನ ಸಾಕಾರ: ಡಿಸಿಎಂ ಡಿಕೆ ಶಿವಕುಮಾರ್

ಹೆಬ್ಬನಹಳ್ಳಿಯ ವಿತರಣಾ ತೊಟ್ಟಿ- 4 ರ ಬಳಿ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಸಂಪುಟ ಸಹೋದ್ಯೋಗಿಗಳು, ಶಾಸಕ ಮಿತ್ರರ ಜೊತೆ ಬಾಗಿನ ಅರ್ಪಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ ಡಿ. ಕೆ. ಶಿವಕುಮಾರ್

Written by - Prashobh Devanahalli | Last Updated : Sep 6, 2024, 08:06 PM IST
    • ಎತ್ತಿನಹೊಳೆ ಏತ ನೀರಾವರಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಸಾಕಾರಗೊಳಿಸಿದೆ
    • 2027 ಕ್ಕೆ ಎಲ್ಲಾ ಕಾಮಗಾರಿ ಮುಗಿಸಿ ಇತಿಹಾಸ ನಿರ್ಮಿಸುತ್ತೇವೆ
    • ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿಕೆ
ಎತ್ತಿನಹೊಳೆ ಯೋಜನೆ: ಹತ್ತು ವರ್ಷಗಳ ಭಗೀರಥ ಪ್ರಯತ್ನ ಸಾಕಾರ: ಡಿಸಿಎಂ ಡಿಕೆ ಶಿವಕುಮಾರ್ title=
File Photo

ಸಕಲೇಶಪುರ: ಎತ್ತಿನಹೊಳೆ ಬಯಲು ಸೀಮೆಯ ಜನರ ಬದುಕಿನ ಜೇನಿನ ಹೊಳೆ, ಬಯಲು ಸೀಮೆ ಬರ ನೀಗಿಸುವ ಜೀವದ ಹೊಳೆ. ಗೌರಿ ಹಬ್ಬದಂದು ಗಂಗೆಗೆ ಬಾಗಿನ ಅರ್ಪಿಸಿ, 10 ವರ್ಷಗಳ ಭಗೀರಥ ಪ್ರಯತ್ನ ನಡೆಸಿ, ಎತ್ತಿನಹೊಳೆ ಏತ ನೀರಾವರಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಸಾಕಾರಗೊಳಿಸಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಇದನ್ನೂ ಓದಿ: ಹೋಟೆಲ್ ರೂಂಗಳಲ್ಲಿ ರಹಸ್ಯ ಕ್ಯಾಮರಾಗಳಿದ್ದರೆ ಇನ್ಮುಂದೆ ಈ ರೀತಿ ಸುಲಭವಾಗಿ ಪತ್ತೆ ಹಚ್ಚಿ!

ಹೆಬ್ಬನಹಳ್ಳಿಯ ವಿತರಣಾ ತೊಟ್ಟಿ- 4 ರ ಬಳಿ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಸಂಪುಟ ಸಹೋದ್ಯೋಗಿಗಳು, ಶಾಸಕ ಮಿತ್ರರ ಜೊತೆ ಬಾಗಿನ ಅರ್ಪಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು "ಕರ್ನಾಟಕದ ನೀರಾವರಿ ಇತಿಹಾಸದಲ್ಲೇ ಇದೊಂದು ಮಹತ್ವದ ದಿನ. ನೂರಾರು ಟೀಕೆಗಳನ್ನು ಎದುರಿಸಿದ್ದಕ್ಕೆ ಸಕಲೇಶ್ವರನ ಪುಣ್ಯ ಕ್ಷೇತ್ರದಿಂದ ವಾಣಿವಿಲಾಸದ ತಾಯಿ ಕಣಿವೆ ಮಾರಮ್ಮನ ಸನ್ನಿಧಿಗೆ ನೀರು ಹರಿಯುತ್ತಿದೆ. ನನ್ನ ಬದುಕಿನಲ್ಲೇ ಎಂದೆಂದಿಗೂ ಮರೆಯಲಾಗದ ಚರಿತ್ರೆಯ ದಿನ. ಗಂಗಾ ಮಾತೆ ಗೌರಿ ಹಬ್ಬದಂದು ಘಟ್ಟ ಹತ್ತಿ ಇಳಿಯುತ್ತಿದ್ದಾಳೆ" ಎಂದು ಹೇಳಿದಳು.

"ಈ ಹಿಂದೆ ಮುಖ್ಯಮಂತ್ರಿಗಳು ಇಂಧನ ಇಲಾಖೆ ಜವಾಬ್ದಾರಿ ನೀಡಿದ್ದರು. ಈಗ ನೀರಾವರಿ ಇಲಾಖೆ ಜವಾಬ್ದಾರಿ ತೆಗೆದುಕೊಂಡ ಮೇಲೆ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಮುಗಿಸಿದ್ದೇವೆ. 2027 ಕ್ಕೆ ಎಲ್ಲಾ ಕಾಮಗಾರಿ ಮುಗಿಸಿ ಇತಿಹಾಸ ನಿರ್ಮಿಸುತ್ತೇವೆ. ಇದು ನಮ್ಮ ತಪಸ್ಸು, ಸಂಕಲ್ಪ, ಪ್ರತಿಜ್ಞೆ" ಎಂದು ಹೇಳಿದರು.

"ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ. ನಮ್ಮ ಪಾಡಿಗೆ ನಾವು ಕೆಲಸ ಮಾಡಬೇಕು. ಆಗ ಕುದಿಯುವವರು ಆವಿಯಾಗುತ್ತಾರೆ. ಉರಿಯುವವರು ಬೂದಿಯಾಗುತ್ತಾರೆ" ಎಂದು ಹೇಳಿದರು.

"ಈ ಯೋಜನೆ ಪೂರ್ಣಗೊಂಡರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಯಾರೋ ಹೇಳಿದ್ದರು. ಗಂಗಾ ಮಾತೆ ಗುಡ್ಡ, ಬೆಟ್ಟಗಳನ್ನು ಇಳಿದು ಬಯಲು ಸೀಮೆಯ ಕಡೆಗೆ ಹರಿಯುತ್ತಿದ್ದಾಳೆ. ಈ ಶುಭ ಯೋಜನೆ ಲೋಕಾರ್ಪಣೆ ಆಗುವ ದಿನವಾದ ಕಾರಣಕ್ಕೆ ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ. ಬಸವಣ್ಣ ನವರ ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎನ್ನುವ ಮಾತಿನ ಮೇಲೆ ನಂಬಿಕೆನ್ನು ಇಟ್ಟವರು ನಾವು. ಅವರ ಟೀಕೆಗಳಿಗೆ ವಿಧಾನಸಭೆಯಲ್ಲಿ ಉತ್ತರ ಕೊಡುತ್ತೇನೆ" ಎಂದು ಹೇಳಿದರು.

"ಗುರಿ ಸಾಧಿಸುವ ಛಲ ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಎತ್ತಿನಹೊಳೆ ಯೋಜನೆ ಬಹುದೊಡ್ಡ ಸಾಕ್ಷಿಯಾಗಿ ನಮ್ಮ ಕಣ್ಣ ಮುಂದಿದೆ. ನಾವು ನುಡಿದಂತೆ ನಡೆದಿದ್ದೇವೆ, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಸಾಕ್ಷಿಗುಡ್ಡೆಗಳನ್ನು ನಿರ್ಮಾಣ ಮಾಡಿದ್ದೇವೆ" ಎಂದರು.

"ಈ ಯೋಜನೆ ಪ್ರಾರಂಭ ಮಾಡಿದ ದಿನದಿಂದ ಇವತ್ತಿನವರೆಗೂ ಬಂದ ಟೀಕೆಗಳು ಒಂದೆರಡಲ್ಲ. ಸುತ್ತಮುತ್ತಲಿನ ಬೆಟ್ಟ, ಗುಡ್ಡಗಳನ್ನು ಮೀರಿಸುವಷ್ಟು ಟೀಕೆಗಳು ಬಂದವು. ಸಮ್ಮಿಶ್ರ ಸರ್ಕಾರ ಇದ್ದಾಗ ಯೋಜನೆಯನ್ನು ವೀಕ್ಷಣೆ ಮಾಡಲು ಬಂದಿದ್ದೆ. ಆಗ ಏನೂ ಕೆಲಸ ಆಗದೆ ಪಾಳು ಬಿದ್ದಿತ್ತು. ಈಗ ಜೀವಕಳೆ ಬಂದಿದೆ" ಎಂದರು.

75 ಲಕ್ಷ ಜನರ ಬಾಯಾರಿಕೆ ನೀಗಿಸುವ ಯೋಜನೆ

"7 ಜಿಲ್ಲೆಗಳ 6,657 ಗ್ರಾಮಗಳ 75 ಲಕ್ಷ ಜನರ ಬಾಯಾರಿಕೆ ನೀಗಿಸುವ ಈ ಯೋಜನೆಯ ವಿರುದ್ಧ ಅನೇಕ ಜನರು ಎನ್ ಜಿಟಿಗೆ ಅರ್ಜಿ ಹಾಕಿದ್ದರು. ಎಲ್ಲಾ ತಕರಾರುಗಳನ್ನು ವಜಾ ಮಾಡಿ ನಮ್ಮ ಪರವಾಗಿ ಎನ್ ಜಿಟಿ ತೀರ್ಪು ನೀಡಿತು. ಇದರಿಂದ 527 ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ. ಏನಾದರೂ ಕೆಲಸ ಮಾಡುವ ಮುನ್ನ ವಜ್ರ ಯಾವುದು, ಕೆಸರು ಯಾವುದು ಎಂದು ತಿಳಿಯಬೇಕು. ವಜ್ರದಿಂದ ವಜ್ರವನ್ನು ಕತ್ತರಿಸಬಹುದು. ಆದರೆ ಕೆಸರಿನಿಂದ, ಕೆಸರನ್ನು ಸ್ವಚ್ಚ ಮಾಡಲು ಆಗುವುದಿಲ್ಲ. ವಜ್ರ ಯಾವುದು ಕೆಸರು ಯಾವುದು ಎಂಬುದನ್ನು ನೀವೇ ನಿರ್ಧಾರ ಮಾಡಿ" ಎಂದರು.

ಬಯಲು ಸೀಮೆಯ ಬದುಕಿನ ನೀರು

"ಎತ್ತಿಗೆ ಸಾಕಾಗುವಷ್ಟು ನೀರು ಮಾತ್ರ ಇಲ್ಲಿದೆ. ಈ ನೀರನ್ನು ಬೆಂಗಳೂರು ಸುತ್ತಮುತ್ತಾ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ ಎಂದು ಪತ್ರಕರ್ತರೊಬ್ಬರು ಹಾಸನ ಜಿಲ್ಲಾಧಿಕಾರಿಗಳ ಬಳಿ ಕೇಳಿದ್ದರಂತೆ. ಇದು ಎತ್ತಿಗಾಗಿ ನೀರಲ್ಲಿ, ಬಯಲು ಸೀಮೆಯ ಜನರ ಬದುಕಿಗಾಗಿ ಎತ್ತುತ್ತಿರುವ ನೀರು" ಎಂದರು.

ಕಾಂಗ್ರೆಸ್ ಸರ್ಕಾರದ ಸಾಕ್ಷಿಗುಡ್ಡೆ

"ಮನುಷ್ಯ ಹುಟ್ಟಿದ ಮೇಲೆ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗಬೇಕು. ಕರ್ನಾಟಕದಲ್ಲಿ ಆಲಮಟ್ಟಿ ಜಲಾಶಯಕ್ಕೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಶಂಕುಸ್ಥಾಪನೆ ಮಾಡಿದರು. ಅದನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಉದ್ಘಾಟನೆ ಮಾಡಿದರು. 2014 ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಮಗಾರಿ ಪ್ರಾರಂಭವಾಗಿ ಅವರಿಂದಲೇ ಉದ್ಘಾಟನೆಯಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಸಾಕ್ಷಿ ಗುಡ್ಡೆ" ಎಂದರು

"23 ಸಾವಿರ ಕೋಟಿ ಹಣ ಖರ್ಚಾಗಲಿದೆ. ಆದರೆ ನಮಗೆ ಹಣಕ್ಕಿಂತ ಜನರ ಬದುಕು ಮುಖ್ಯ. ರೈತರು ಈ ರಾಜ್ಯ ಮತ್ತು ದೇಶಕ್ಕಾಗಿ ಭೂಮಿ ಕಳೆದುಕೊಂಡಿದ್ದಾರೆ. ವೀರಪ್ಪ ಮೊಯಿಲಿ ಅವರ ಅನೇಕ ದಿನಗಳ ಆಸೆ ಈಡೇರುತ್ತಿದೆ" ಎಂದರು.

"ಈ ಯೋಜನೆ ನನ್ನಿಂದ ಮಾತ್ರ ಸಾಧ್ಯವಾಗಿಲ್ಲ. ಇದರ ಜಾರಿಗೆ ಸಹಕರಿಸಿದ ಮಾನ್ಯ ಸಿಎಂ ಸಿದ್ದರಾಮಯ್ಯನವರು, ನನ್ನ ಸಂಪುಟದ ಸಹೋದ್ಯೋಗಿಗಳು, ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು, ಟಿ.ಬಿ.ಜಯಚಂದ್ರ ಅವರು, ಕೋಲಾರದ ಭಾಗದ ಶಾಸಕರು, ಸಂಸದರು, ಶಾಸಕರು, ಯೋಜನೆಗೆ ಜಮೀನು ಕೊಟ್ಟ ರೈತರು, ಕೆಲಸ ಮಾಡಿದ ಅಧಿಕಾರಿಗಳು, ಇಂಜಿನಿಯಯರ್ ಗಳಿಂದ ಹಿಡಿದು ಕಟ್ಟಕಡೆಯ ಕಾರ್ಮಿಕರವರೆಗೆ ಪ್ರತಿಯೊಬ್ಬರನ್ನು ವಿನಮ್ರವಾಗಿ ಅಭಿನಂದಿಸುತ್ತೇನೆ" ಎಂದು ಹೇಳಿದರು. ಇದೇ ವೇಳೆ ರಾಜ್ಯದ ಜನರಿಗೆ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳನ್ನು ಡಿಸಿಎಂ ಅವರು ತಿಳಿಸಿದರು.

ವಾಸ್ತು ಹಾಗೂ ಶುದ್ಧೀಕರಣ ಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದ ಡಿಸಿಎಂ

ಗೌರಿ ಹಬ್ಬದ ದಿನ ಶುಭ ಮುಹೂರ್ತ, ಶುಭ ಘಳಿಗೆ, ಶುಭ ದಿನದಂದು ಎತ್ತಿನಹೊಳೆ ಯೋಜನೆಯ ಚಾಲನೆ ಯಾವುದೇ ವಿಘ್ನಗಳಿಲ್ಲದೆ ನೆರವೇರಲಿ ಎಂದು ಹಿಂದಿನ ದಿನ (ಗುರುವಾರದಂದು) ಸಂಕಲ್ಪ ಪೂಜೆಯಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಬೆಳಿಗ್ಗೆ 6 ಗಂಟೆಯ ವೇಳೆಗಾಗಲೇ ಸಕಲೇಶಪುರ ದೊಡ್ಡನಗರದ ಎತ್ತಿನಹೊಳೆ ಡಿಸಿ 3- ಪಂಪ್ ಹೌಸ್ ನಲ್ಲಿ ಮೈಸೂರಿನ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ನಡೆದ ವಾಸ್ತು ಪೂಜೆ ಹಾಗೂ ಶುದ್ಧೀಕರಣ ಪೂಜೆಯಲ್ಲಿ ಪಾಲ್ಗೊಂಡರು.

ದೊಡ್ಡನಗರದ ಡಿ.ಸಿ 3 ಪಂಪ್ ಹೌಸ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಸಚಿವರಾದ ಪರಮೇಶ್ವರ್, ಎಂ.ಬಿ. ಪಾಟೀಲ್ ಅವರು ಡಿಸಿ-3 ಪಂಪ್ ಹೌಸ್ ನಲ್ಲಿ ನೀರೆತ್ತುವ ಯಂತ್ರಗಳಿಗೆ ಚಾಲನೆ ನೀಡಿದರು. ಇಲ್ಲಿಂದ 1500 ಕ್ಯೂಸೆಕ್ ನೀರನ್ನು ಮೇಲಕ್ಕೆ ಎತ್ತಿ ಹೆಬ್ಬನಹಳ್ಳಿಯಲ್ಲಿರುವ ಡಿಸಿ - 4ಕ್ಕೆ ಹರಿಸಲಾಯಿತು. ಹೆಬ್ಬನಹಳ್ಳಿಯಲ್ಲಿ ಮಹತ್ವಾಕಾಂಕ್ಷಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಮೊದಲ ಹಂತವನ್ನು ಉದ್ಘಾಟಿಸಲಾಯಿತು.

ಇದನ್ನೂ ಓದಿ:  ಒಂದು ಬಾರಿ ಈ ಚಟ್ನಿ ತಿಂದರೆ ಸಾಕು ಹೈ ಬ್ಲಡ್ ಶುಗರ್ ಕೂಡ ತಕ್ಷಣ ನಾರ್ಮಲ್ ಆಗಿಬಿಡುತ್ತದೆ! ಒಂದು ತಿಂಗಳವರೆಗೆ ಹೆಚ್ಚಾಗಲ್ಲ ಮಧುಮೇಹ

ಫಲಾನುಭವಿ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಿಂದ ಚಾಲನೆ

ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ, ಹೊಂಗದಹಳ್ಳಗಳಲ್ಲಿ ಇರುವ ಏಳು ವಿಯರ್ ಗಳನ್ನು ಫಲಾನುಭವಿ ಜಿಲ್ಲೆಗಳ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಶುಕ್ರವಾರ (ಸೆ. 6 ರಿಂದ) 60 ದಿನಗಳ ಕಾಲ ನಿರಂತರವಾಗಿ ಸುಮಾರು 5 ಟಿಎಂಸಿ ನೀರನ್ನು ಎತ್ತಿ  ವೇದಾ ವ್ಯಾಲಿ ಮೂಲಕ ವಾಣಿ ವಿಲಾಸ ಅಣೆಕಟ್ಟಿಗೆ ಹರಿಸಲಾಗುವುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News