ನವದೆಹಲಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಮತ್ತು ವಿಚಾರಣೆ ಮಾಡಲೇಬೇಕಿದ್ದರೆ ಬೆಂಗಳೂರಿನಲ್ಲಿ ನಡೆಸುವಂತೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮತ್ತೆ ನವೆಂಬರ್ 7ಕ್ಕೆ ಮುಂದೂಡಿದೆ.
ಇಂದು ಉಷಾ ಮತ್ತು ಗೌರಮ್ಮ ಅವರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದ ಮುಂದೆ ಡಿಕೆಶಿ ತಾಯಿ ಪರವಾಗಿ ವಕೀಲರು ಇದೇ ನವಂಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.
ಡಿಕೆಶಿ ತಾಯಿ ಗೌರಮ್ಮ ಅವರಿಗೆ 85 ವರ್ಷ. ಸಿಆರ್‌ಪಿಸಿ ಅನ್ವಯ 65 ವರ್ಷ ಮೇಲ್ಪಟ್ಟವರಿಗೆ ಪೊಲೀಸ್ ಠಾಣೆಗೆ ವಿಚಾರಣೆಗೆ ಬರಬೇಕೆಂದು ಸಮನ್ಸ್ ನೀಡುವಂತಿಲ್ಲ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಿಚಾರಣೆಗೆ ಹಾಜರಾಗಲು ಅವರ ಆರೋಗ್ಯವೂ ಅನುವು ಮಾಡಿಕೊಡಬೇಕು. ಒಂದೊಮ್ಮೆ ವಿಚಾರಣೆ ನಡೆಸಲೇಬೇಕು ಎಂದಿದ್ದರೆ, ಗೌರಮ್ಮ ಹಾಗೂ ಉಷಾ ಅವರನ್ನು ಬೆಂಗಳೂರಿನಲ್ಲೇ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ಡಿಕೆಶಿ ತಾಯಿ ಮತ್ತು ಪತ್ನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ನೇತೃತ್ವದ ಪೀಠ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದರು.