ಬೆಂಗಳೂರು: ಕೋವಿಡ್ ಸಮಯದಲ್ಲಿ, ರೈತರು ಹಾಗೂ ಜಿಎಸ್ ಟಿ ವಿಚಾರದಲ್ಲಿ, ಕೇಂದ್ರದ ಯೋಜನೆಗಳ ಅನುದಾನದಲ್ಲಿ, ಬರ ಪರಿಹಾರ, ನರೇಗಾ ಯೋಜನೆ ಹಾಗೂ ನಿರಾವರಿ ಇಲಾಖೆ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯವನ್ನು ನೋಡಿಕೊಂಡು ಇನ್ನೆಷ್ಟು ದಿನ ಸುಮ್ಮನೆ ಕೂರಬೇಕು? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದರು.
ರಾಜ್ಯದ ಹಿತ ಕಾಯುವ ಹೋರಾಟಕ್ಕೆ ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಇಡಬೇಕಿದೆ. ರಾಜ್ಯದ ಜನ ನಮಗೆ ಅವಕಾಶ ಕೊಟ್ಟಿದ್ದು ಅವರಿಗೆ ನ್ಯಾಯ ಒದಗಿಸಿ ಋಣ ತೀರಿಸುವುದು ನಮ್ಮ ಕರ್ತವ್ಯ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕೇಂದ್ರ ಸರ್ಕಾರದ ಜತೆ ಸಹಕಾರ ಸಮನ್ವಯತೆಯಿಂದ ನಡೆದುಕೊಂಡು ಬರುತ್ತಿದ್ದೇವೆ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಮಾಡುತ್ತಿರುವ ಅನ್ಯಾಯವನ್ನು ಪ್ರತಿ ವರ್ಷ ಗಮನಿಸುತ್ತಿದ್ದೇವೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲೂ ಡಬಲ್ ಇಂಜಿನ ಸರ್ಕಾರ ಬಂದರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಿದ್ದರು. ಮಧ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಕೂಡ ಇತ್ತು. ನಮ್ಮ ಸರ್ಕಾರ ಬಂದ ನಂತರ ಕೇಂದ್ರ ಬಜೆಟ್ ನಲ್ಲಿ ನ್ಯಾಯ ಒದಗಿಸುತ್ತಾರೆ ಎಂದು ನಾವು ತಾಳ್ಮೆಯಿಂದ ಕಾಯುತ್ತಿದ್ದೆವು. ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಘೋಷಣೆಯಾದ ನೀರಾವರಿ ಇಲಾಖೆಯ ಅನುದಾನವನ್ನಾದರೂ ಬಿಡುಗಡೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಅವರು ನುಡಿದಂತೆ ನಡೆಯುತ್ತಾರೆ ಎಂದು ನಂಬಿಕೆ ಇಟ್ಟಿದ್ದೆವು. ಆದರೆ ನಮ್ಮ ನಂಬಿಕೆ, ನಿರೀಕ್ಷೆ ಹುಸಿಯಾಯಿತು ಎಂದು ಹೇಳಿದರು.
ಇದನ್ನೂ ಓದಿ: ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ
ರಾಜ್ಯದಿಂದ ಕೇಂದ್ರಕ್ಕೆ ಹೋಗುತ್ತಿರುವ ಸಂಪನಲ್ಲಿ ರಾಜ್ಯಕ್ಕೆ ಸಿಗಬೇಕಾದ ಪಾಲು ನ್ಯಾಯಯುತವಾಗಿ ಸಿಗುತ್ತದೆ ಎಂದು ಭಾವಿಸಿದ್ದೆವು. ನಾವು ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದರೂ ನಮಗೆ ಕೇಂದ್ರದಿಂದ ಸಿಗುವ ಅನುದಾನದಲ್ಲಿ ತೀರಾ ಅನ್ಯಾಯವಾಗಿದೆ. ನಮಗಿಂತ ಕಡಿಮೆ ತೆರಿಗೆ ಪಾವತಿಸುವ ಉತ್ತರ ಭಾರತದ ರಾಜ್ಯಗಳಿಗೆ ನಮಗಿಂತ ಹೆಚ್ಚಿನ ಪಾಲು ನೀಡಲಾಗುತ್ತಿದೆ. ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತಿ ಈ ಬಗ್ಗೆ ದೇಶ ಹಾಗೂ ರಾಜ್ಯದ ಜನರಿಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಫೆ.7ರಂದು ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ನಡೆಸುತ್ತಿದೆ ಎಂದು ಹೇಳಿದರು.
ಈ ಪ್ರತಿಭಟನೆಗೆ ಪಕ್ಷಾತೀತವಾಗಿ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಸಂಸದರು ಭಾಗವಹಿಸಬೇಕು ಎಂದು ಆಹ್ವಾನ ನೀಡುತ್ತೇನೆ. ಆಮೂಲಕ ರಾಜ್ಯದ ಜನರ ಋಣ ತೀರಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಈಗಲಾದರೂ ಕೇಂದ್ರ ಸರ್ಕಾರದ ಕಣ್ಣು ಹಾಗೂ ಹೃದಯ ತೆರೆಸಬೇಕು. ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಸರ್ಕಾರದ ವತಿಯಿಂದ ಪತ್ರ ಬರೆದಿದ್ದೇವೆ. ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ನಾವು ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿವರಿಸಿ ಮನವಿ ಮಾಡಿದ್ದೇವೆ. ರಾಜ್ಯದಲ್ಲಿ ಬರಗಾಲದಿಂದ 223 ತಾಲೂಕುಗಳು ಬರಕ್ಕೆ ತುತ್ತಾಗಿವೆ. ಇದುವರೆಗೂ ಬರಗಾಲದ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.
ನರೇಗಾ ಯೋಜನೆಯಲ್ಲಿ ನೀಡಲಾಗುವ 100 ಮಾನವ ಕೂಲಿ ದಿನಗಳ ಪ್ರಮಾಣವನ್ನು ಬರ ಪೀಡಿತ ಪ್ರದೇಶಗಳಲ್ಲಿ 150 ದಿನಗಳಿಗೆ ಏರಿಕೆ ಮಾಡಬಹುದು ಎಂದು ಕಾನೂನಿನಲ್ಲಿ ಇದೆ. ಅದನ್ನೂ ಅವರು ನೀಡುತ್ತಿಲ್ಲ. ನಿರಂತರವಾಗಿ ಇಷ್ಟೋಂದು ಅನ್ಯಾಯವಾದರೂ ನಾವು ಇನ್ನೆಷ್ಟು ದಿನ ನೋಡಿಕೊಂಡು ಸುಮ್ಮನೆ ಕೂರಬೇಕು. ನ್ಯಾಯಕ್ಕಾಗಿ, ಜನರ ಬದುಕಿಗಾಗಿ, ಜನರಿಗೆ ಆರ್ಥಿಕ ಶಕ್ತಿ ತುಂಬಲು ಈ ಹೋರಾಟಕ್ಕೆ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಗಲಿದೆ ತಾಪಮಾನ: ಕರಾವಳಿ ಭಾಗಗಳಲ್ಲಿ ಹವಮಾನ ಬದಲಾವಣೆ!
ಸಂಸತ್ತಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳ ವಿಚಾರದಲ್ಲಿ ವಿತ್ತ ಸಚಿವರ ಪಾತ್ರವಿಲ್ಲ ಎಂಬ ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಶ್ರೀಮತಿ ನಿರ್ಮಲಾ ಸೀತರಾಮನ್ ಅವರು ಬಹಳ ಬುದ್ದಿವಂತರು ಎಂಬುದು ನನಗೆ ಗೊತ್ತಿದೆ. ಅವರು ಕರ್ನಾಟಕದ ಪ್ರತಿನಿಧಿಯಾಗಿದ್ದು, ಅವರು ಕಳೆದ ಬಜೆಟ್ ನಲ್ಲಿ ಭದ್ರಾಮೇಲ್ದಂಡೆ ಯೋಜನೆ ವಿಚಾರವಾಗಿ 5300 ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದರು. ಈ ಘೋಷಣೆ ಮಾಡಿದ್ದು ವಿತ್ತ ಸಚಿವರೇ ಅಲ್ಲವೇ? ಯಾವುದೇ ಮಾಹಿತಿ ಇಲ್ಲದೆ ಸಚಿವರು ಇಂತಹ ಘೋಷಣೆಯನ್ನು ಬಜೆಟ್ ನಲ್ಲಿ ನೀಡುವುದಿಲ್ಲ ಎಂದು ಹೇಳಿದರು.
ಚುನಾವಣೆಗೂ ಮುನ್ನ ವಿತ್ತ ಸಚಿವರು ಈ ಘೋಷಣೆ ಮಾಡಿದ್ದರು. ಇದು ಕೇವಲ ಒಂದು ಉದಾಹರಣೆ. ಇನ್ನು ಹಣಕಾಸು ಆಯೋಗದ ವಿಚಾರದಲ್ಲಿ ಆಗಿರುವ ತಾರತಮ್ಯ ಸರಿಪಡಿಸಲು ವಿತ್ತ ಸಚಿವರಿಗೆ ಸಂಪೂರ್ಣ ಅಧಿಕಾರವಿದೆ. ಗುಜರಾತಿನಲ್ಲಿ ಗಿಫ್ಟ್ ಸಿಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು ಕರ್ನಾಟಕ ರಾಜ್ಯಕ್ಕೂ ಆ ಯೋಜನೆ ನೀಡಿ. ಅವರು ಕರ್ನಾಟಕದವರಾಗಿದ್ದು ಕರ್ನಾಟಕಕ್ಕೂ ಒಂದು ಗಿಫ್ಟ್ ಸಿಟಿ ನೀಡಲಿ. ನಾವು ಅದಕ್ಕೆ ಸಿದ್ಧರಾಗಿದ್ದೇವೆ. ನಾವು ಭಾರತೀಯರೇ. ದೇಶವನ್ನು ಒಟ್ಟಾಗಿಡುವುದು ನಮ್ಮ ಆಶಯ. ಆದರೆ ಇಂತಹ ತಾರತಮ್ಯವೇಕೆ? ಎಂದು ಪ್ರಶ್ನಿಸಿದರು.
ನಿಮ್ಮ ಪ್ರತಿಭಟನೆಯಲ್ಲಿ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ನ ನೀಡುತ್ತೀರಾ ಎಂದು ಕೇಳಿದಾಗ, ನಾವು ಈ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಇದು ಕರ್ನಾಟಕಕ್ಕೆ ಸಿಗಬೇಕಾದ ಪಾಲು ಪಡೆಯುವ ವಿಚಾರ. ಇದು ರಾಜ್ಯದ ವಿಷಯ ಎಂದು ತಿಳಿಸಿದರು.
ಕೇರಳ, ತೆಲಂಗಾಣ ಹಾಗೂ ಇತರೆ ರಾಜ್ಯಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ ಎಂದು ಕೇಳಿದಾಗ, ನಾನು ಬೇರೆ ರಾಜ್ಯಗಳ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಕೇರಳ ತಮ್ಮ ಹಕ್ಕಿನಂತೆ ಹೋರಾಟ ಮಾಡುತ್ತಿದ್ದಾರೆ. ಹಸಿವಾದ ಮಗು ಅಳುವುದು ಸಹಜ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಆರೋಪಗಳು ರಾಜಕೀಯ ಪ್ರೇರಿತ, ಅವರು ಗ್ಯಾರಂಟಿ ಯೋಜನೆಗಳಿಗೆ ಹಣ ವೆಚ್ಚ ಮಾಡುತ್ತಿದ್ದಾರೆ ಎಂಬು ನಿರ್ಮಲಾ ಸೀತರಾಮನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೂ ಗ್ಯಾರಂಟಿ ಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪಾಲನ್ನು ನೀಡಲಿ ಸಾಕು, ನಮ್ಮ ರಾಜ್ಯವನ್ನು ನಾವು ನಡೆಸುತ್ತೇವೆ ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.