ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಳೆದೆರಡು ದಿನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದರು. ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಏತನ್ಮಧ್ಯೆ, ರಾಜ್ಯದ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಏಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳುತ್ತಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.
ಅಷ್ಟಕ್ಕೂ ಸಿದ್ದರಾಮಯ್ಯ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗದೇ ಇರುವ ಮುಖ್ಯ ಕಾರಣ ಎಂದರೆ, ನಾಲ್ಕು ದಿನಗಳ ಹಿಂದಷ್ಟೇ ಅವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯಾಗಿದ್ದು, ವೈದ್ಯರು ಸಿದ್ದರಾಮಯ್ಯಗೆ ಕಡ್ಡಾಯವಾಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, 4 ದಿನದ ಹಿಂದೆ ನಾನು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವೈದ್ಯರು ಕೆಲವು ದಿನಗಳ ಕಡ್ಡಾಯ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಈ ನಡುವೆ ಉತ್ತರ ಕರ್ನಾಟಕ ಭಾಗ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ, ಅಲ್ಲಿ ಹೋಗಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಬೇಕೆಂದು ಮನಸ್ಸು ತುಡಿಯುತ್ತಿದ್ದರೂ, ನನ್ನ ದುರಾದೃಷ್ಟಕ್ಕೆ ಅದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
4 ದಿನದ ಹಿಂದೆ ನಾನು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವೈದ್ಯರು ಕೆಲವು ದಿನಗಳ ಕಡ್ಡಾಯ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಈ ನಡುವೆ ಉತ್ತರ ಕರ್ನಾಟಕ ಭಾಗ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ, ಅಲ್ಲಿ ಹೋಗಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಬೇಕೆಂದು ಮನಸ್ಸು ತುಡಿಯುತ್ತಿದ್ದರೂ, ನನ್ನ ದುರಾದೃಷ್ಟಕ್ಕೆ ಅದು ಸಾಧ್ಯವಾಗುತ್ತಿಲ್ಲ. pic.twitter.com/jgoIjXFv29
— Siddaramaiah (@siddaramaiah) August 9, 2019
ಇದರ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಾನು ಆಡಳಿತ ಪಕ್ಷದಲ್ಲಿಯೇ ಇರಲಿ, ವಿರೋಧ ಪಕ್ಷದಲ್ಲಿಯೇ ಇರಲಿ ಜನರ ಸಂಕಷ್ಟಕ್ಕೆ ನೆರವಾಗುವುದು ಆದ್ಯ ಕರ್ತವ್ಯವೆಂದು ನಂಬಿ ರಾಜಕಾರಣ ಮಾಡುತ್ತ ಬಂದವನು. ಈ ಕಾರಣಕ್ಕಾಗಿಯೇ ನನ್ನ ಬದಲು ನನ್ನ ಮಗ, ವರುಣಾ ಕ್ಷೇತ್ರದ ಶಾಸಕರಾದ ಯತೀಂದ್ರ ಅವರನ್ನು ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಕಳುಹಿಸಿದ್ದೇನೆ.
ಬಾದಾಮಿ ಸಮೀಪದ ಪಟ್ಟದಕಲ್ಲು ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿರುವ 20ಕ್ಕೂ ಹೆಚ್ಚು ಗ್ರಾಮಸ್ಥರು ರಕ್ಷಣೆಗಾಗಿ ದೇವಾಲಯ ಏರಿ ಕುಳಿತಿದ್ದಾರೆ. ಹೆಲಿಕಾಪ್ಟರ್ ಮೂಲಕ ಅವರನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಯವರಿಗೆ ತಿಳಿಸಿದ್ದೇನೆ.
ಹೆಲಿಕಾಪ್ಟರ್‌ಗಳ ಕೊರತೆಯಿಂದಾಗಿ ರಕ್ಷಣಾ ಕಾರ್ಯದಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಸೇನೆಯ ಇನ್ನಷ್ಟು ಹೆಲಿಕಾಪ್ಟರ್‌ಗಳನ್ನು ತರಿಸಿಕೊಂಡು ಸಂಕಷ್ಟದಲ್ಲಿ ಇರುವವರಿಗೆ ನೆರವಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.