ಮೈಸೂರು: ಸಿದ್ದರಾಮಯ್ಯ ರಾಮನಗರ ಕ್ಷೇತ್ರದಲ್ಲಿ ಒಂದು ತಿಂಗಳು ಬೇಕಾದರೂ ಪ್ರಚಾರ ಮಾಡಲಿ, ತಾವು ಒಂದು ದಿನವೂ ಪ್ರಚಾರ ಮಾಡದೇ ಗೆಲ್ಲುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದಿನಿಂದ ಮೂರೂ ದಿನಗಳ ಕಾಲ ಮೈಸೂರಿನಲ್ಲಿ ಪ್ರಚಾರ ಆರಂಭಿಸಿರುವ ಕುಮಾರಸ್ವಾಮಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಚಾರ ಆರಂಭಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಸೋಲಿಸಲು ತಾವು ಒಂದು ದಿನ ರಾಮನಗರ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೆ ಸಾಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಸಿದ್ದರಾಮಯ್ಯ ಅವರು ಒಂದು ದಿನ ಮಾತ್ರ ಯಾಕೆ? ಒಂದು ತಿಂಗಳು ರಾಮನಗರದಲ್ಲಿ ಕ್ಯಾಂಪ್ ಹಾಕಿಕೊಂಡು ಪ್ರಚಾರ ಮಾಡಲಿ. ಬೇಕಿದ್ದರೆ ನಾನು ಒಂದು ದಿನವೂ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದಿಲ್ಲ. ಯಾರು ಗೆಲ್ಲುತ್ತಾರೋ ನೋಡಿಯೇ ಬಿಡೋಣ" ಎಂದು ಸವಾಲು ಹಾಕಿದರು.
ಮುಂದುವರಿದು, ರಾಮನಗರ ಕ್ಷೇತ್ರಕ್ಕೂ ಸಿದ್ದರಾಮಯ್ಯ ಅವರಿಗೂ ಸಂಬಂಧವೇನು? 5 ವರ್ಷಗಳಲ್ಲಿ ರಾಮನಗರದ ಅಭಿವೃದ್ಧಿಗೆ ಸಿದ್ದರಾಮಯ್ಯ ಮಾಡಿದ್ದಾದರೂ ಏನು? ಆದರೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನನ್ನ ಕೊಡುಗೆ ಬಹಳಷ್ಟಿದೆ. ಸಿದ್ದರಾಮಯ್ಯಗಿಂತಲೂ ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾನೆ. ಅದಕ್ಕೆ ಕಾರಣ ಜಿ.ಟಿ.ದೇವೇಗೌಡರು" ಎಂದು ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಸಿದ್ದರಾಮಯ್ಯ ಮತಯಾಚಿಸಿದ್ದ ಹಳ್ಳಿಗಳಲ್ಲೇ ಕುಮಾರಸ್ವಾಮಿ ಅವರೂ ಸಹ ಪ್ರಚಾರಕ್ಕೆ ಮುಂದಾಗಿದ್ದಾರೆ. ತಮ್ಮ 3 ದಿನಗಳ ಮೈಸೂರು ಪ್ರವಾಸದಲ್ಲಿ ಒಟ್ಟು 62 ಹಳ್ಳಿಗಳಲ್ಲಿ ಕುಮಾರಸ್ವಾಮಿ ಮತಯಾಚನೆ ಮಾಡಲಿದ್ದಾರೆ.
ಇಂದು(ಏ.14) ಚಾಮುಂಡೇಶ್ವರಿ ಕ್ಷೇತ್ರದ ಹಿನಕಲ್ ಗ್ರಾಮದಿಂದ ಪ್ರಚಾರ ಪ್ರಾರಂಭಿಸಿರುವ ಕುಮಾರಸ್ವಾಮಿ ಅವರು, ಮಧ್ನಾಹ್ನ 3 ಗಂಟೆ ವೇಳೆಗೆ ಎಸ್.ಕಲ್ಲಹಳ್ಳಿಯಲ್ಲಿ ಪ್ರಚಾರ ನಡೆಸಿ, ನಂತರ ಹೆಚ್.ಡಿ.ಕೋಟೆಯಲ್ಲಿ ನಡೆಯುವ ವಿಕಾಸ ಪರ್ವಕ್ಕೆ ತೆರಳಲಿದ್ದಾರೆ. ಏಪ್ರಿಲ್ 15ರಂದು ಲಿಂಗಾಂಬುದ್ದಿ ಪಾಳ್ಯದಿಂದ ಪ್ರಚಾರ ಆರಂಭಿಸಿ ಮಧ್ಯಾಹ್ನ 2.30ರ ವೇಳೆಗೆ ನಾಡನಹಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಏಪ್ರಿಲ್ 16 ರಂದು ಬೆಳಗ್ಗೆ 7:30ಕ್ಕೆ ಹೂಟಗಳ್ಳಿಯಿಂದ ಪ್ರಚಾರ ಪ್ರಾರಂಭಿಸಿ ಮಧ್ಯಾಹ್ನ 2:30ಕ್ಕೆ ಗುಂಗ್ರಾಲ್ ಛತ್ರಕ್ಕೆ ಬಂದು ಮತಯಾಚನೆ ಮಾಡಲಿದ್ದಾರೆ.