ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರ ಬಂಧನವನ್ನು ವಿರೋಧಿಸಿ ಇಂದು ಕಾಂಗ್ರೆಸ್ ಕರೆ ನೀಡಿರುವ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಇಡಿ ಸಮನ್ಸ್ ನೀಡಿದಾಗಲೆಲ್ಲಾ ಡಿ.ಕೆ. ಶಿವಕುಮಾರ್ ವಿಚಾರಣೆಗೆ ತಪ್ಪದೇ ಹಾಜರಾಗಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಕುಮಾರ್ ಅವರಿಗೆ ಹಬ್ಬದ ಆಚರಣೆಗೂ ಬಿಡದಂತೆ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ವಿಚಾರಣೆಗೆ ಡಿಕೆಶಿ ಹಾಜರಾಗಿದ್ದರೂ ಅವರನ್ನು ಬಂಧಿಸುವ ಅಗತ್ಯ ಏನಿತ್ತು. ಅನುಕೂಲಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳುಟ್ಟಿದೆ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಡಿ.ಕೆ. ಶಿವಕುಮಾರ್ ಬಂಧನದ ಕುರಿತು ಇದಕ್ಕೂ ಮೊದಲು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಪ್ರತಿಪಕ್ಷದ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಅಕ್ರಮವಾಗಿ ಬಳಸುತ್ತಿರುವುದು ದೃಢಪಟ್ಟಿದೆ. ಹಬ್ಬದ ಆಚರಣೆಗೂ ಅವಕಾಶ ನೀಡದೆ 4 ದಿನಗಳ ಕಾಲ ನಿರಂತರ ವಿಚಾರಣೆಗೆ ಒಳಪಟ್ಟ ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪದ ಮೇಲೆ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿದ್ದರು.
ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಪ್ರತಿಪಕ್ಷದ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಅಕ್ರಮವಾಗಿ ಬಳಸುತ್ತಿರುವುದು ದೃಢಪಟ್ಟಿದೆ.ಹಬ್ಬದ ಆಚರಣೆಗೂ ಅವಕಾಶ ನೀಡದೆ 4ದಿನಗಳ ಕಾಲ ನಿರಂತರ ವಿಚಾರಣೆಗೆ ಒಳಪಟ್ಟ @DKShivakumar ರನ್ನು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪದ ಮೇಲೆ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ.
— H D Kumaraswamy (@hd_kumaraswamy) September 3, 2019